ಇಸ್ಲಾಮಾಬಾದ್: ನೆರೆಯ ಭಾರತ (India) ಚಂದ್ರನನ್ನು ತಲುಪಿದೆ. ನಮ್ಮ ಮಕ್ಕಳು ಇಲ್ಲಿ ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ ಎಂದು ಪಾಕ್ ಆಡಳಿತ ವ್ಯವಸ್ಥೆ ಕುರಿತು ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ (MQM-P) ಸಂಸದ ಸೈಯದ್ ಮುಸ್ತಫಾ ಕಮಾಲ್ (Syed Mustafa Kamal) ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕ್ (Pakistan) ಆಡಳಿತ ವ್ಯವಸ್ಥೆಗೆ ಸಂಸತ್ ನಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಭಾರತೀಯ ಕಾರ್ಯವೈಖರಿ ಬಗ್ಗೆ ಸಂತಸದ ಮಾತುಗಳನ್ನು ಆಡುತ್ತಿದ್ದಾರೆ. ಭಾರತವು ಚಂದ್ರನನ್ನು ತಲುಪಿದೆ ಎಂಬ ಸುದ್ದಿಯನ್ನು ನಾವು ಟಿವಿ ಪರದೆಗಳಲ್ಲಿ ನೋಡಿದ ಎರಡು ಸೆಕೆಂಡುಗಳ ನಂತರ ಕರಾಚಿಯಲ್ಲಿ ತೆರೆದ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿದೆ ಎಂಬ ಸುದ್ದಿ ಬಂದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಂಧ್ ಪ್ರಾಂತ್ಯದಲ್ಲಿ ಸುಮಾರು 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಖ್ಯೆ ಸುಮಾರು 2.6 ಕೋಟಿಯಾಗಿದೆ. 11 ಸಾವಿರ ಶಾಲೆಗಳು ಖಾಲಿ ಇವೆ ಎಂದು ವರದಿ ತೋರಿಸುತ್ತದೆ. ದೇಶದಲ್ಲಿ 2.62 ಕೋಟಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ತೀವ್ರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.