ಭಾರತೀಯ ಟಿ20 ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಹೀನಾಯವಾಗಿ ಸೋಲಿಸುವ ಮೂಲಕ ಅತ್ಯಧಿಕ ರನ್ ಕಲೆಹಾಕಿದ ಸಾಧನೆ ಮಾಡಿದೆ.ಅಲ್ಲದೇ, ಅತ್ಯಂತ ಹೀನಾಯವಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿದೆ.
ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭಿಕರಾಗಿ ಕಣಕ್ಕೆ ಇಳಿದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಭಾರತಕ್ಕೆ ಉತ್ತಮ ಆರಂಭ ನೀಡಿದರು.
ಮೊದಲ ವಿಕೆಟ್ ಗೆ ಈ ಜೋಡಿ 73 ರನ್ ಗಳ ಕಾಣಿಕೆ ನೀಡಿತು. ಅಭಿಷೇಕ್ ಶರ್ಮಾ (36) ಔಟಾದರು. ಆ ನಂತರ ಸ್ಯಾಮ್ಸನ್ – ತಿಲಕ್ ವರ್ಮಾ ಭರ್ಜರಿಯಾಗಿ ಆಡಿದರು. ಈ ಜೋಡಿಯು 2ನೇ ವಿಕೆಟ್‌ಗೆ 210 ರನ್ ಗಳ ಕಾಣಿಕೆ ನೀಡಿತು.
ಸಂಜು ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 106 ರನ್ ಗಳಿಸಿದರೆ, ತಿಲಕ್ ವರ್ಮಾ 47 ಎಸೆತಗಳಲ್ಲಿ ಅಜೇಯ 120 ರನ್ ಗಳಿಸಿದರು. ಹೀಗಾಗಿ ಭಾರತ ತಂಡವು 20 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಗಳಿಸಿತು.
ಈ ಕಠಿಣ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಸೋಲು ಕಂಡಿತು. ಅಲ್ಲದೇ, 283 ರನ್ಗಳೊಂದಿಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಭಾರತದ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿತ್ತು. 2007ರ ಟಿ20 ವಿಶ್ವಕಪ್ನಲ್ಲಿ ಜೋಹಾನ್ಸ್ಬರ್ಗ್ನಲ್ಲಿ ಶ್ರೀಲಂಕಾ ತಂಡವು ಕೀನ್ಯಾ ವಿರುದ್ಧ 260 ರನ್ ಗಳಿಸಿತ್ತು.
283 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 18.2 ಓವರ್ ಗಳಲ್ಲಿ 148 ರನ್ ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಭಾರತ ತಂಡವು 135 ರನ್ ಗಳ ಭರ್ಜರಿ ಗೆಲುವು ದಾಖಲಿಸಿತು. 2023 ರಲ್ಲಿ ಡರ್ಬನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 111 ರನ್ ಗಳಿಂದ ಸೋತಿದ್ದು, ದಕ್ಷಿಣ ಆಫ್ರಿಕಾದ ಹೀನಾಯ ಸೋಲಾಗಿತ್ತು. ಈಗ ಭಾರತದ ಎದುರು ಹೀನಾಯ ಸೋಲು ಕಂಡಿದೆ.