ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ ನಲ್ಲಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನ ತೋರಿಸಿದ್ದಾರೆ. ಪರಿಣಾಮ ಭಾರತ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಬ್ಯಾಟ್ಸಮನ್ ಗಳು ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ದ್ವಿತೀಯ ಇನಿಂಗ್ಸ್ ನ್ನು ಭಾರತ ತಂಡ 487 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಆಸೀಸ್ ಪಡೆಗೆ 534 ರನ್ ಗಳ ಬೃಹತ್ ಮೊತ್ತದ ಗುರಿ ನೀಡಲಾಯಿತು.
ಮೊದಲ ಇನ್ನಿಂಗ್ಸ್ ನಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ಕೈ ಕೊಟ್ಟಿದ್ದರು. ಪರಿಣಾಮ 150 ರನ್ ಕಲೆ ಹಾಕಿತ್ತು. ಇನ್ನೊಂದೆಡೆ ಆಸ್ಟ್ರೇಲಿಯಾ ಕೂಡ ಮೊದಲ ಇನ್ನಿಂಗ್ಸ್ ನಲ್ಲಿ ಮುಗ್ಗರಿಸಿತು. ಆಸ್ಟ್ರೇಲಿಯಾ ಕೇವಲ 104 ರನ್ಗಳಿಗೆ ಮುಗ್ಗರಿಸಿ 46 ರನ್ಗಳ ಹಿನ್ನಡೆ ಅನುಭವಿಸಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾಗೆ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 201 ರನ್ಗಳ ಜೊತೆಯಾಟವಾಡಿದ ಬಳಿಕ ಕೆಎಲ್ ರಾಹುಲ್ (77) ಔಟ್ ಆದರು..
ನಂತರ ಬಂದ ದೇವದತ್ ಪಡಿಕ್ಕಲ್ 25 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 205 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ ಜೈಸ್ವಾಲ್ 297 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 15 ಫೋರ್ಗಳೊಂದಿಗೆ 161 ರನ್ ಗಳಿಸಿ ಔಟ್ ಆದರು. ಆದರೆ, ನಂತರ ಬಂದ ಧ್ರುವ್ ಜುರೇಲ್ (1) ಹಾಗೂ ರಿಷಭ್ ಪಂತ್ (1) ಬೇಗನೆ ವಿಕೆಟ್ ಒಪ್ಪಿಸಿದರು.
ಜವಾಬ್ದಾರಿಯುತ ಆಟದ ಮೊರೆ ಹೋದ ವಿರಾಟ್ ಕೊಹ್ಲಿ 143 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 30 ಶತಕ ಬಾರಿಸಿದ ವಿಶ್ವದ 16ನೇ ಬ್ಯಾಟರ್ ಎಂಬ ದಾಖಲೆ ಬರೆದರು. ಕೊಹ್ಲಿ ಶತಕ ಸಿಡಿಸುತ್ತಿದ್ದಂತೆ ಭಾರತ ತಂಡ ಇನ್ನಿಂಗ್ಸ್ ಡಿಕ್ಲೀರ್ ಮಾಡಿಕೊಂಡಿತು. ಈ ವೇಳೆ ಭಾರತ 6 ವಿಕೆಟ್ ಕಳೆದುಕೊಂಡು 487 ರನ್ ಗಳಿಸಿತ್ತು. ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮತ್ತೆ ಮುಗ್ಗರಿಸಿತು. ಜಸ್ಪ್ರೀತ್ ಬುಮ್ರಾ ಮೊದಲ ಓವರ್ನಲ್ಲೇ ಆಘಾತ ನೀಡಿದ್ದಾರೆ. ದ್ವಿತೀಯ ಇನಿಂಗ್ಸ್ನ 4ನೇ ಎಸೆತದಲ್ಲಿ ನಾಥನ್ ಮೆಕ್ಸ್ವೀನಿ (0) ಅನ್ನು ಎಲ್ಬಿಡಬ್ಲ್ಯೂಗೆ ಕೆಡವಿದರು. ಮೊಹಮ್ಮದ್ ಸಿರಾಜ್ ಪ್ಯಾಟ್ ಕಮಿನ್ಸ್ (2) ವಿಕೆಟ್ ಪಡೆದರು. ದಿನದಾಟದ ಕೊನೆಯ ಓವರ್ನಲ್ಲಿ ಮಾರ್ನಸ್ ಲಾಬುಶೇನ್ (3) ಕೂಡ ಬುಮ್ರಾಗೆ ಬಲಿಯಾದರು. ಸದ್ಯ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 12 ರನ್ ಗಳಿಸಿದೆ.