ನ್ಯೂಜಿಲೆಂಡ್ ವಿರುದ್ದ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿದ್ದು, ವೈಟ್ ವಾಶ್ ಗೆ ಬಲಿಯಾಗಿದೆ.
ಈ ಗೆಲುವಿನ ಮೂಲಕ ಕಿವೀಸ್ ಪಡೆ ಭಾರತದಲ್ಲಿ ಚೊಚ್ಚಲ ಬಾರಿಗೆ ಸರಣಿ ಗೆದ್ದು ಬೀಗಿದೆ. 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ತಂಡವು ಭಾರತದಲ್ಲಿ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡವನ್ನು 3-0 ಅಂತರದಿಂದ ಸೋಲಿಸಿ ತವರಿನಲ್ಲಿ ಭಾರತ ತಂಡವನ್ನು ವೈಟ್ ವಾಶ್ ಮಾಡಿದ ಐತಿಹಾಸಿಕ ಸಾಧನೆ ಮಾಡಿದೆ.
ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಮೊದಲ ಇನ್ನಿಂಗ್ಸ್ ನಲ್ಲಿ ನ್ಯೂಜಿಲೆಂಡ್ ತಂಡವು ಡೇರಿಲ್ ಮಿಚೆಲ್ (82) ಅವರ ಅರ್ಧಶತಕದ ನೆರವಿನಿಂದ 235 ರನ್ ಗಳಿಸಿತು. ಉತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ ತಂಡ ಶುಭ್ಮನ್ ಗಿಲ್ (90) ಹಾಗೂ ರಿಷಭ್ ಪಂತ್ (60) ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ 263 ರನ್ ಕಲೆಹಾಕಿತು. ಹೀಗಾಗಿ ಭಾರತ ತಂಡ 28 ರನ್ ಗಳ ಮುನ್ನಡೆ ಸಾಧಿಸಿತು. ನ್ಯೂಜಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ ನಲ್ಲಿ ಕೇವಲ 174 ರನ್ ಗಳಿಗೆ ಆಲೌಟ್ ಆಯಿತು. ಆದರೆ, ಭಾರತ ತಂಡ 121 ರನ್ ಗಳಿಗೆ ಆಲೌಟ್ ಆಗುವ ಮೂಲಕ 25 ರನ್ ಗಳಿಂದ ಸೋಲು ಕಂಡಿತು.