ಬೆಂಗಳೂರು: ಆದಾಯ ತೆರಿಗೆ ರಿಟರ್ನ್ಸ್ ಗೆ ಜುಲೈ 31ರ ಗಡುವು ಮುಗಿಯುತ್ತದೆ. ಅಷ್ಟರೊಳಗೆ ಐಟಿ ರಿಟರ್ನ್ಸ್ ಸಲ್ಲಿಸಬೇಕು ಎಂಬ ಆತಂಕ, ಧಾವಂತ ಹೆಚ್ಚಿನ ಜನರಿಗೆ ಇತ್ತು. ಆದರೆ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಐಟಿಆರ್ ಗಡುವನ್ನು ವಿಸ್ತರಣೆ ಮಾಡಿದೆ. ಜುಲೈ 31ರವರೆಗೆ ಇದ್ದ ಐಟಿಆರ್ ಗಡುವನ್ನು ಈಗ ಸಿಬಿಡಿಟಿಯು ಸೆಪ್ಟೆಂಬರ್ 15ಕ್ಕೆ ವಿಸ್ತರಣೆ ಮಾಡಿದೆ. ಹಾಗಾಗಿ, ತೆರಿಗೆ ಪಾವತಿದಾರಿಗೆ ಐಟಿಆರ್ ಸಲ್ಲಿಸಲು ಹೆಚ್ಚಿನ ಸಮಯ ಸಿಕ್ಕಂತಾಗಿದೆ.
ಐಟಿಆರ್ ಫಾರ್ಮ್ ಗಳಲ್ಲಿ ಗಣನೀಯ ಬದಲಾವಣೆಗಳಾಗಿದ್ದು, ಸಿಸ್ಟಮ್ ಅಪ್ಡೇಟ್ ನಡೆಯುತ್ತಿದೆ. ಹೀಗಾಗಿ, ರಿಟರ್ನ್ಸ್ ಸಲ್ಲಿಸಲು ಹೆಚ್ಚು ಸಮಯ ಬೇಕಾಗಬಹುದು ಎಂದು ಪರಿಗಣಿಸಿ ಅಂತಿಮ ದಿನಾಂಕವನ್ನು ಸೆಪ್ಟೆಂಬರ್ 15ರವರೆಗೂ ವಿಸ್ತರಿಸಲಾಗಿದೆ. ಈ ವಿಸ್ತರಣೆಯಿಂದ ತೆರಿಗೆ ಪಾವತಿದಾರರು ಯಾವುದೇ ತಪ್ಪುಗಳಿಲ್ಲದೆ ರಿಟರ್ನ್ಸ್ ಸಲ್ಲಿಸಲು ಸಾಕಷ್ಟು ಸಮಯ ಸಿಗಲಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಂಗಳವಾರ ಮಾಹಿತಿ ನೀಡಿದೆ.
ಐಟಿ ರಿಟರ್ನ್ಸ್ ಗಡುವಿನ ವಿಸ್ತರಣೆಯು ತೆರಿಗೆದಾರರಿಗೆ ಸುಗಮ ಹಾಗೂ ನಿಖರವಾಗಿ ರಿಟರ್ನ್ಸ್ ಸಲ್ಲಿಕೆಗೆ ಖಾತ್ರಿ ಒದಗಿಸುತ್ತದೆ. ಗಮನಾರ್ಹ ಐಟಿ ಫಾರಂ ಬದಲಾವಣೆ, ಸಿಸ್ಟಂ ಅಭಿವೃದ್ಧಿ ಮತ್ತು ಟಿಡಿಎಸ್ ಕ್ರೆಡಿಟ್ ಪ್ರತಿಫಲನದಿಂದಾಗಿ ಈ ವಿಸ್ತರಣೆಯು ಹೆಚ್ಚಿನ ಸಮಯವನ್ನು ಒದಗಿಸುತ್ತದೆ. ಇದು ಎಲ್ಲರಿಗೂ ಸುಗಮ ಮತ್ತು ಹೆಚ್ಚು ನಿಖರವಾದ ಫೈಲಿಂಗ್ ಅನುಭವವನ್ನು ಖಾತ್ರಿಗೊಳಿಸುತ್ತದೆ ಎಂದು ಸಿಬಿಡಿಟಿ ತಿಳಿಸಿದೆ.
ಹಿಂದಿನ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯು ತಾತ್ವಿಕವಾಗಿ ಏಪ್ರಿಲ್ 1ರಂದು ಆರಂಭವಾಗುತ್ತದೆ. ಜುಲೈ 31ರವರೆಗೆ ಗಡುವು ಇರುತ್ತದೆ. ಆದರೆ, ಈ ಬಾರಿ ಜೂನ್ 15ರ ನಂತರ ಐಟಿಆರ್ ಸಲ್ಲಿಕೆಗೆ ಯತ್ನಿಸುವುದು ಉತ್ತಮ ಎಂದು ಪರಿಣತರು ಹೇಳುತ್ತಿದ್ದಾರೆ. ಐಟಿಆರ್ ಫಾರ್ಮ್ ಗಳು ಲಭ್ಯ ಇವೆಯಾದರೂ, ಅವುಗಳನ್ನು ಸಲ್ಲಿಸಲು ಬೇಕಾದ ಆನ್ಲೈನ್ ಸಾಫ್ಟ್ವೇರ್ ಇತ್ಯಾದಿ ಯುಟಿಲಿಟಿಗಳನ್ನು ಆದಾಯ ತೆರಿಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ, ರಿಟರ್ನ್ಸ್ ಫೈಲ್ ಮಾಡುವುದನ್ನು ಮುಂದೂಡುವುದು ಸೂಕ್ತ ಎನ್ನುವ ಅಭಿಪ್ರಾಯ ಇತ್ತು. ಅದರಂತೆ ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.



















