ಕರಾಚಿ: ಐಸಿಸಿ ಚಾಂಪಿಯನ್ಸ್ ಶಿಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಪಾಕ್ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿದೆ.
ವಿಲ್ ಯಂಗ್, ಟಾಮ್ ಲ್ಯಾಥಮ್ ಅಬ್ಬರದ ದ್ವಿಶತಕದಾಟದಿಂದಾಗಿ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ್ ವಿರುದ್ಧ ಭರ್ಜರಿ 60 ರನ್ ಗಳ ಜಯ ಸಾಧಿಸಿದೆ.
ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ತಂಡ ಮೊದಲ ಪಂದ್ಯದಲ್ಲೇ ಆತಿಥೇಯ ಪಾಕಿಸ್ತಾನವನ್ನು 60 ರನ್ ಗಳಿಂದ ಸೋಲಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಟಾಮ್ ಲ್ಯಾಥಮ್ ಮತ್ತು ವಿಲ್ ಯಂಗ್ ಅವರ ಶತಕಗಳ ನೆರವಿನಿಂದ 50 ಓವರ್ ಗಳಲ್ಲಿ 320 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು. ಈ ವೇಳೆ 5 ವಿಕೆಟ್ ಕಳೆದುಕೊಂಡಿತ್ತು.
ಸವಾಲಿನ ಗುರಿ ಬೆನ್ನಟ್ಟಿದ ಪಾಕಿಸ್ತಾನ್ ತಂಡ ತವರು ನೆಲದಲ್ಲಿ ಉದ್ಘಾಟನಾ ಪಂದ್ಯದಲ್ಲೇ ಮುಖಭಂಗ ಅನುಭವಿಸಿತು. ಅಲ್ಲದೇ, ಈ ಪಂದ್ಯದಲ್ಲಿ ಪೂರ್ಣ ಓವರ್ ಗಳನ್ನು ಕೂಡ ಆಡಲು ಪಾಕ್ ಗೆ ಆಗಲಿಲ್ಲ. ಕೇವಲ 47.2 ಓವರ್‌ಗಳಲ್ಲಿ 260 ರನ್ ಗಳಿಗೆ ಆಲೌಟ್ ಆಗಿ ಸೋಲು ಕಂಡಿತು.
ಪಾಕಿಸ್ತಾನ ಪರ ಖುಸ್ದಿಲ್ ಶಾ ಮತ್ತು ಬಾಬರ್ ಆಝಂ ಅರ್ಧಶತಕ ಸಿಡಿಸಿದರು. ಕಿವೀಸ್ ವಿರುದ್ಧ ಸೋತಿರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿದೆ. ಪಾಕಿಸ್ತಾನ್ ತಂಡ ಮುಂದಿನ ಪಂದ್ಯದಲ್ಲಿ ಭಾರತದ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಸೋಲು ಕಂಡರೆ ಟೂರ್ನಿಯಿಂದಲೇ ಹೊರ ಬೀಳಲಿದೆ.