ನವಿ ಮುಂಬೈ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಐತಿಹಾಸಿಕ ಸಾಧನೆ ಮಾಡಿ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ ಬೆನ್ನಲ್ಲೇ, ಇಡೀ ದೇಶವೇ ಸಂಭ್ರಮದಲ್ಲಿ ತೇಲುತ್ತಿದೆ. ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುವಂತೆ, ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರು ಒಂದು ವಿಶೇಷ ಹರಕೆ ಹೊತ್ತಿದ್ದಾರೆ. ಒಂದು ವೇಳೆ ಭಾರತ ತಂಡವು ಚೊಚ್ಚಲ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡರೆ, ಸೆಮಿಫೈನಲ್ ಪಂದ್ಯದ ಹೀರೋಯಿನ್ ಜೆಮಿಮಾ ರಾಡ್ರಿಗ್ಸ್ ಅವರೊಂದಿಗೆ ಯುಗಳ ಗೀತೆ ಹಾಡುವುದಾಗಿ ‘ಲಿಟಲ್ ಮಾಸ್ಟರ್’ ಘೋಷಿಸಿದ್ದಾರೆ.
‘ಅವಳ ಗಿಟಾರ್, ನನ್ನ ದನಿ’: ಗವಾಸ್ಕರ್ ಹೃದಯಸ್ಪರ್ಶಿ ಮಾತು
ಆಸ್ಟ್ರೇಲಿಯಾ ವಿರುದ್ಧದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಜಯ ಸಾಧಿಸಿದ ನಂತರ ‘ಸ್ಪೋರ್ಟ್ಸ್ ಟುಡೇ’ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಸ್ಕರ್, ತಮ್ಮ ಸಂತಸವನ್ನು ವಿಭಿನ್ನವಾಗಿ ವ್ಯಕ್ತಪಡಿಸಿದರು. “ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ, ನಾನು ಮತ್ತು ಜೆಮಿಮಾ ಒಟ್ಟಿಗೆ ಒಂದು ಹಾಡನ್ನು ಹಾಡುತ್ತೇವೆ, ಅವಳು ಒಪ್ಪಿದರೆ ಮಾತ್ರ. ಅವಳು ತನ್ನ ಗಿಟಾರ್ ನುಡಿಸುತ್ತಾಳೆ, ನಾನು ಜೊತೆಯಲ್ಲಿ ಹಾಡುತ್ತೇನೆ,” ಎಂದು ಗವಾಸ್ಕರ್ ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ದಾರೆ.
“ನಾವು ಈ ಹಿಂದೆಯೂ ಒಮ್ಮೆ ಹೀಗೆ ಮಾಡಿದ್ದೇವೆ. ಕೆಲವು ವರ್ಷಗಳ ಹಿಂದೆ ನಡೆದ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ವೇದಿಕೆಯಲ್ಲಿದ್ದ ಬ್ಯಾಂಡ್‌ನೊಂದಿಗೆ ನಾವಿಬ್ಬರೂ ಸೇರಿಕೊಂಡೆವು. ಅವಳು ಗಿಟಾರ್ ನುಡಿಸಿದಳು, ನಾನು ನನ್ನ ಕೈಲಾದ ಮಟ್ಟಿಗೆ ಹಾಡಿದೆ. ಈಗ ಭಾರತ ಗೆದ್ದರೆ, ಈ ವಯಸ್ಸಾದವನೊಂದಿಗೆ ಹಾಡಲು ಆಕೆಗೆ ಸಂತೋಷವಿದ್ದರೆ, ನಾನು ಮತ್ತೊಮ್ಮೆ ಆ ಕ್ಷಣವನ್ನು ಮರುಸೃಷ್ಟಿಸಲು ಸಿದ್ಧನಿದ್ದೇನೆ,” ಎಂದು ಗವಾಸ್ಕರ್ ವಿನಮ್ರವಾಗಿ ನುಡಿದರು.
ಹಿಂದಿನ ಜುಗಲ್ಬಂದಿ ನೆನಪು
ಗವಾಸ್ಕರ್ ಮತ್ತು ಜೆಮಿಮಾ ನಡುವಿನ ಈ ಸಂಗೀತದ ಬಾಂಧವ್ಯ ಹೊಸದೇನಲ್ಲ. 2024ರ ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಈ ಜೋಡಿಯು ‘ಹಮ್ ಕಿಸಿಸೆ ಕಮ್ ನಹೀ’ ಚಿತ್ರದ ಜನಪ್ರಿಯ ಗೀತೆ ‘ಕ್ಯಾ ಹುವಾ ತೇರಾ ವಾದಾ’ ಹಾಡನ್ನು ಪ್ರಸ್ತುತಪಡಿಸಿ ಎಲ್ಲರ ಮನಗೆದ್ದಿದ್ದರು. ಅಂದು ಜೆಮಿಮಾ ಗಿಟಾರ್ ಮೂಲಕ ಸ್ವರದಬ್ಬರ ಸೃಷ್ಟಿಸಿದ್ದರೆ, ಗವಾಸ್ಕರ್ ತಮ್ಮ ಗಾಯನದಿಂದ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದರು. ಈ ಅನಿರೀಕ್ಷಿತ ಜುಗಲ್ಬಂದಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಗಳಿಸಿತ್ತು.
ಐತಿಹಾಸಿಕ ಚೇಸಿಂಗ್, ಫೈನಲ್‌ಗೆ ಲಗ್ಗೆ
ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ನೀಡಿದ್ದ 339 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ, ಜೆಮಿಮಾ ರಾಡ್ರಿಗ್ಸ್ ಅವರ ಅಜೇಯ 127 ರನ್‌ಗಳ ಅಮೋಘ ಶತಕದ ನೆರವಿನಿಂದ 48.3 ಓವರ್‌ಗಳಲ್ಲೇ ಗುರಿ ತಲುಪಿ ಐತಿಹಾಸಿಕ ಜಯ ಸಾಧಿಸಿತು. ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಯಶಸ್ವಿ ಚೇಸಿಂಗ್ ಆಗಿದೆ. ಈ ಗೆಲುವಿನೊಂದಿಗೆ ಭಾರತ ಮೂರನೇ ಬಾರಿಗೆ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದ್ದು, ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇದೀಗ ಇಡೀ ದೇಶದ ಕಣ್ಣು ಆ ಪಂದ್ಯದ ಮೇಲಿದ್ದು, ಭಾರತ ಚೊಚ್ಚಲ ಪ್ರಶಸ್ತಿ ಗೆದ್ದು, ಗವಾಸ್ಕರ್-ಜೆಮಿಮಾ ಜೋಡಿಯ ಯುಗಳ ಗೀತೆಯನ್ನು ಕೇಳುವಂತಾಗಲಿ ಎಂದು ಹಾರೈಸುತ್ತಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ ಲೀಗ್-12: ತವರಿನಲ್ಲಿ ದಬಂಗ್ ದರ್ಬಾರ್ ; ಪುಣೇರಿ ಪಲ್ಟನ್‌ಗೆ ನಿರಾಸೆ, ಡೆಲ್ಲಿ ಚಾಂಪಿಯನ್!



















