ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ವ್ಯಕ್ತಿಯೋರ್ವನ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇದರ ಬೆನ್ನಲ್ಲೆ 60 ವರ್ಷದ ಮಹಿಳೆಯೊಬ್ಬರು 2003ರಲ್ಲಿ ಧರ್ಮಸ್ಥಳದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ತನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಅವರ ಕಳೆಬರವನ್ನು ಪತ್ತೆಹಚ್ಚಲು ನೆರವಾಗುವಂತೆ ಧರ್ಮಸ್ಥಳ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಪದ್ಮನಾಭನಗರ ನಿವಾಸಿ ಮತ್ತು ಕೇಂದ್ರ ತನಿಖಾ ದಳದ (CBI) ನಿವೃತ್ತ ಸ್ಟೆನೋಗ್ರಾಫರ್ ಸುಜಾತಾ ಭಟ್ ತಮ್ಮ ದೂರಿನಲ್ಲಿ ತಮ್ಮ ಮಗಳು ಅಂದು ನಾಪತ್ತೆಯಾದ ಘಟನೆಗಳನ್ನು ವಿವರಿಸಿದ್ದಾರೆ. 2003ರಲ್ಲಿ ಮಣಿಪಾಲ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ತಮ್ಮ ಪುತ್ರಿ ಅನನ್ಯಾ ಸ್ನೇಹಿತರೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದಳು. ನಂತರ ಅನನ್ಯಾಳ ಸಹಪಾಠಿ ರಶ್ಮಿ ಅವರಿಂದ ನನಗೆ ದುಃಖಕರ ಕರೆ ಬಂದಿತ್ತು. ಧರ್ಮಸ್ಥಳದಲ್ಲಿ ಅನನ್ಯಾ ಕಾಣೆಯಾಗಿದ್ದಾಳೆ ಎಂದು ಹೇಳಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಂದು ಅನನ್ಯಾಳನ್ನು ಹೋಲುವಂತಾ ಯುವತಿಯೊಬ್ಬಳನ್ನು ದೇವಾಲಯದ ಸಿಬ್ಬಂದಿ ಕರೆದೊಯ್ದಿದ್ದನ್ನು ನೋಡಿದ್ದೇವೆ ಎಂದು ಕೆಲ ಸ್ಥಳೀಯರು ನನಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಲು ನಾನು ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು. ಅಧಿಕಾರಿಗಳು ನನ್ನ ದೂರನ್ನು ಸ್ವೀಕರಿಸಲು ನಿರಾಕರಿಸಿದರು. ಅಲ್ಲದೆ ನನ್ನ ಮಗಳೇ ಯಾರೊಂದಿಗೋ ಓಡಿಹೋಗಿರಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನನ್ನು ಠಾಣೆಯಿಂದ ಹೊರಗೆ ಕಳುಹಿಸಿದರು ಎಂದು ಸುಜಾತಾ ಹೇಳಿದ್ದಾರೆ.