ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೊಬ್ಬರು ಬಿಜೆಪಿ ಶಾಸಕರೊಬ್ಬರ ಬಾಯಿಗೆ ಆ್ಯಸಿಡ್ ಸುರಿಯುವುದಾಗಿ ಬೆದರಿಕೆ ಹಾಕಿದ್ದು, ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾದ ಅಬ್ದುರ್ ರಹೀಂ ಬಕ್ಷಿ, ಶನಿವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ದೇಶದ ಇತರ ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಈ ಸಭೆ ಆಯೋಜಿಸಲಾಗಿತ್ತು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಕ್ಷಿ, ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರನ್ನು ಹೇಳದೆ, ಅವರ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ಬಂಗಾಳದಿಂದ ಹೊರಗೆ ಕೆಲಸ ಮಾಡುವ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ, ಅವರು ರೋಹಿಂಗ್ಯಾಗಳು, ಬಾಂಗ್ಲಾದೇಶಿಗರು ಎಂದು ನಿರ್ಲಜ್ಜವಾಗಿ ಹೇಳುವ ವ್ಯಕ್ತಿ… ಇದನ್ನು ಮತ್ತೆ ನಿನ್ನ ಬಾಯಿಂದ ಕೇಳಿದರೆ, ನಿನ್ನ ಬಾಯಿಗೆ ಆ್ಯಸಿಡ್ ಸುರಿದು ನಿನ್ನ ಧ್ವನಿಯನ್ನು ಬೂದಿ ಮಾಡುತ್ತೇನೆ. ನಿನ್ನ ಮುಖವನ್ನು ಆ್ಯಸಿಡ್‌ನಿಂದ ಸುಟ್ಟುಹಾಕುತ್ತೇನೆ,” ಎಂದು ಗುಡುಗಿದ್ದಾರೆ. ಇದಲ್ಲದೆ, ಜಿಲ್ಲೆಯಲ್ಲಿ ಬಿಜೆಪಿ ಧ್ವಜಗಳನ್ನು ಹರಿದುಹಾಕಿ ಮತ್ತು ಪಕ್ಷವನ್ನು ಬಹಿಷ್ಕರಿಸುವಂತೆ ಜನರಿಗೆ ಅವರು ಕರೆ ನೀಡಿದ್ದಾರೆ.
ಬಿಜೆಪಿ ರೋಷಾವೇಷ
ಟಿಎಂಸಿ ನಾಯಕನ ಈ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಇದು ಟಿಎಂಸಿಯ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿರುವ ಬಿಜೆಪಿ, ಜನರನ್ನು ಬೆದರಿಸುವ ಕೆಲಸವನ್ನು ಟಿಎಂಸಿ ನಾಯಕರು ಮಾಡುತ್ತಿದ್ದಾರೆ ಎಂದು ಆರೋಪಿಸಿದೆ.
“ಮಾಲ್ಡಾದಲ್ಲಿ ಇಂತಹ ಹೇಳಿಕೆಗಳು ಈಗ ಸಾಮಾನ್ಯವಾಗುತ್ತಿವೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದ ಟಿಎಂಸಿ ನಾಯಕರು ಈ ರೀತಿ ಮಾತನಾಡುತ್ತಿದ್ದಾರೆ,” ಎಂದು ಮಾಲ್ಡಾ ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಖಗೇನ್ ಮುರ್ಮು ಹೇಳಿದ್ದಾರೆ.
ಈ ಹಿಂದೆ ಕೂಡ ಅಬ್ದುರ್ ರಹೀಂ ಬಕ್ಷಿ ಅವರು ಬಿಜೆಪಿ, ಸಿಪಿಎಂ ಮತ್ತು ಕಾಂಗ್ರೆಸ್ ನಾಯಕರ ಕೈ-ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಿ ವಿವಾದ ಸೃಷ್ಟಿಸಿದ್ದರು.