ಮುಂಬೈ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸಿದ್ದ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ನಿವೃತ್ತ ಪೊಲೀಸ್ ಇನ್‌ಸ್ಪೆಕ್ಟರ್ ಮೆಹಬೂಬ್ ಮುಜಾವರ್ ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. “ಕೇಸರಿ ಭಯೋತ್ಪಾದನೆ” ಎಂಬ ನಕಲಿ ಕಥೆಯನ್ನು ಸೃಷ್ಟಿಸುವ ಭಾಗವಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸುವಂತೆ ತಮಗೆ ಆದೇಶ ನೀಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ಸೋಲಾಪುರದಲ್ಲಿ ಮಾತನಾಡಿದ ಮುಜಾವರ್, ಈ ಆದೇಶಗಳನ್ನು ಕೇವಲ ಒಂದು ಸುಳ್ಳು ನಿರೂಪಣೆಯನ್ನು ಸೃಷ್ಟಿಸುವ ಉದ್ದೇಶದಿಂದ ನೀಡಲಾಗಿತ್ತು ಎಂದು ಹೇಳಿದ್ದಾರೆ. ಎನ್ಐಎ ವಿಶೇಷ ನ್ಯಾಯಾಲಯವು ಬಿಜೆಪಿ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದಂತೆ ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿದ ಬೆನ್ನಲ್ಲೇ ಮುಜಾವರ್ ಅವರಿಂದ ಇಂಥದ್ದೊಂದು ಹೇಳಿಕೆ ಹೊರಬಿದ್ದಿದೆ. ತೀರ್ಪಿನ ಬಗ್ಗೆ ಮಾತನಾಡಿದ ಅವರು, “ಈ ತೀರ್ಪು, ಎಟಿಎಸ್ ತನ್ನ ತನಿಖೆಯ ಸಮಯದಲ್ಲಿ ನಡೆಸಿದ ನಕಲಿ ಕೆಲಸಗಳನ್ನು ಬಯಲು ಮಾಡಿದೆ” ಎಂದು ಹೇಳಿದ್ದಾರೆ.
ತನಿಖೆಯೇ ಒಂದು ನಾಟಕ
ಮುಜಾವರ್ ಅವರು ಮತ್ತಷ್ಟು ಆರೋಪಗಳನ್ನು ಮಾಡುತ್ತಾ, “ತನಿಖೆಯನ್ನು ಒಬ್ಬ ನಕಲಿ ಅಧಿಕಾರಿಯ ನೇತೃತ್ವದಲ್ಲಿ ನಡೆಸಲಾಯಿತು” ಮತ್ತು ಇಡೀ ತನಿಖಾ ಪ್ರಕ್ರಿಯೆಯೇ ಒಂದು ನಾಟಕವಾಗಿತ್ತು ಎಂದಿದ್ದಾರೆ. “ಈ ತೀರ್ಪು ನಕಲಿ ಅಧಿಕಾರಿಯ ನಕಲಿ ತನಿಖೆಯನ್ನು ಬಹಿರಂಗಪಡಿಸಿದೆ” ಎಂದು ಹಿರಿಯ ಅಧಿಕಾರಿಯೊಬ್ಬರ ಹೆಸರನ್ನು ಹೇಳಿ ಆರೋಪಿಸಿದರು. ರಾಮ್ ಕಲ್ಸಂಗ್ರಾ, ಸಂದೀಪ್ ಡಾಂಗೆ, ದಿಲೀಪ್ ಪಾಟಿದಾರ್ ಮತ್ತು ಮೋಹನ್ ಭಾಗವತ್ ಸೇರಿದಂತೆ ಹಲವರನ್ನು ಗುರಿಯಾಗಿಸಲು ತನಗೆ ಗೌಪ್ಯ ಸೂಚನೆಗಳನ್ನು ನೀಡಲಾಗಿತ್ತು ಎಂದು ಅವರು ಹೇಳಿಕೊಂಡರು. “ಹೋಗಿ ಮೋಹನ್ ಭಾಗವತ್ ಅವರನ್ನು ಹಿಡಿದು ತನ್ನಿ ಎಂದು ನನಗೆ ಸೂಚಿಸಲಾಗಿತ್ತು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಆದೇಶ ಪಾಲಿಸದಿದ್ದಕ್ಕೆ ವೃತ್ತಿಜೀವನ ನಾಶ
ಈ ಆದೇಶಗಳು “ಭಯಾನಕ” ಮತ್ತು ವಿವೇಚನೆಗೆ ಮೀರಿದ್ದರಿಂದ ನಾನು ಅವುಗಳನ್ನು ಪಾಲಿಸಲಿಲ್ಲ ಎಂದು ಮುಜಾವರ್ ಸ್ಪಷ್ಟಪಡಿಸಿದ್ದಾರೆ. “ಮೋಹನ್ ಭಾಗವತ್ ಅವರಂತಹ ಗಣ್ಯ ವ್ಯಕ್ತಿಯನ್ನು ಬಂಧಿಸುವುದು ನನ್ನ ಸಾಮರ್ಥ್ಯಕ್ಕೆ ಮೀರಿದ್ದಾಗಿತ್ತು. ನಾನು ಆದೇಶಗಳನ್ನು ಪಾಲಿಸದ ಕಾರಣ, ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಯಿತು ಮತ್ತು ಅದು ನನ್ನ 40 ವರ್ಷಗಳ ವೃತ್ತಿಜೀವನವನ್ನು ನಾಶಮಾಡಿತು” ಎಂದು ಮುಜಾವರ್ ಆರೋಪಿಸಿದ್ದಾರೆ. ತಮ್ಮ ಆರೋಪಗಳನ್ನು ಬೆಂಬಲಿಸಲು ತಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದೂ ಅವರು ಹೇಳಿದ್ದಾರೆ. “ಕೇಸರಿ ಭಯೋತ್ಪಾದನೆ ಎಂಬುದು ಇರಲಿಲ್ಲ. ಎಲ್ಲವೂ ನಕಲಿಯಾಗಿತ್ತು” ಎಂದು ಅವರು ದೃಢವಾಗಿ ಹೇಳಿದ್ದಾರೆ.