ಹೈದರಾಬಾದ್: ಮಹಿಳೆಯೊಬ್ಬರ ಕೈ-ಕಾಲು ಕಟ್ಟಿ, ಪ್ರೆಶರ್ ಕುಕ್ಕರ್‌ನಿಂದ ಹಲವು ಬಾರಿ ಹೊಡೆದು, ಕೊನೆಗೆ ಚಾಕು ಮತ್ತು ಕತ್ತರಿಯಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಹೈದರಾಬಾದ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದೆ. ಕೃತ್ಯ ಎಸಗಿದ ಇಬ್ಬರು ವ್ಯಕ್ತಿಗಳು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದು ದೋಚಿ, ಅಲ್ಲೇ ಸ್ನಾನ ಮಾಡಿ, ರಕ್ತಸಿಕ್ತ ಬಟ್ಟೆಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
ಈ ಘಟನೆಯು ಐಟಿ ಹಬ್ ಎನಿಸಿದ ಸೈಬರಾಬಾದ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ನಡೆದಿದ್ದು, ಗೇಟೆಡ್ ಕಮ್ಯೂನಿಟಿಯ ಭದ್ರತಾ ವ್ಯವಸ್ಥೆಯ ಬಗ್ಗೆ ಕಳವಳ ಮೂಡಿಸಿದೆ.
50 ವರ್ಷದ ರೇಣು ಅಗರವಾಲ್ ಅವರು ತಮ್ಮ ಪತಿ ಮತ್ತು ಮಗನೊಂದಿಗೆ ಸೈಬರಾಬಾದ್‌ನ ಸ್ವಾನ್ ಲೇಕ್ ಅಪಾರ್ಟ್‌ಮೆಂಟ್‌ನ 13ನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ, ಉಕ್ಕಿನ ವ್ಯಾಪಾರಿಯಾಗಿದ್ದ ಅವರ ಪತಿ ಮತ್ತು 26 ವರ್ಷದ ಮಗ ಕೆಲಸಕ್ಕೆಂದು ತೆರಳಿದ್ದರು. ಸಂಜೆ 5 ಗಂಟೆಗೆ ರೇಣು ಅವರಿಗೆ ಕರೆ ಮಾಡಿದಾಗ, ಅವರು ಕರೆ ಸ್ವೀಕರಿಸಿಲ್ಲ. ಪದೇ ಪದೇ ಕರೆ ಮಾಡಿದರೂ ಉತ್ತರ ಬಾರದ ಕಾರಣ, ಆತಂಕಗೊಂಡ ಪತಿ, ಬೇಗನೆ ಮನೆಗೆ ಧಾವಿಸಿದ್ದಾರೆ.
ಮನೆಯ ಬಾಗಿಲು ಒಳಗಿನಿಂದ ಲಾಕ್ ಆಗಿದ್ದರಿಂದ, ಪ್ಲಂಬರ್ ಸಹಾಯದಿಂದ ಬಾಲ್ಕನಿ ಮೂಲಕ ಒಳಗೆ ಪ್ರವೇಶಿಸಿದಾಗ ರೇಣು ಅವರ ರಕ್ತಸಿಕ್ತ ದೇಹ ಪತ್ತೆಯಾಗಿದೆ.
ಕೈ-ಕಾಲು ಕಟ್ಟಿದ್ದ ಹಂತಕರು, ರೇಣು ಅವರಿಗೆ ಪ್ರೆಶರ್ ಕುಕ್ಕರ್‌ನಿಂದ ಹೊಡೆದು, ಚಾಕು ಮತ್ತು ಕತ್ತರಿಯಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ, ಮನೆಯಲ್ಲಿದ್ದ ಸುಮಾರು 40 ಗ್ರಾಂ ಚಿನ್ನ ಮತ್ತು 1 ಲಕ್ಷ ರೂಪಾಯಿ ನಗದು ದೋಚಿದ್ದಾರೆ. ಬಳಿಕ, ಮನೆಯಲ್ಲೇ ಸ್ನಾನ ಮಾಡಿ, ಬೇರೆ ಬಟ್ಟೆಗಳನ್ನು ಧರಿಸಿ, ತಮ್ಮ ರಕ್ತಸಿಕ್ತ ಬಟ್ಟೆಗಳನ್ನು ಘಟನಾ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಮನೆಗೆಲಸದವರೇ ಶಂಕಿತರು
ಪ್ರಾಥಮಿಕ ತನಿಖೆಯಲ್ಲಿ, ಇಬ್ಬರು ಮನೆಗೆಲಸದವರೇ ಈ ಕೃತ್ಯದ ಪ್ರಮುಖ ಶಂಕಿತರು ಎಂದು ತಿಳಿದುಬಂದಿದೆ. ಒಬ್ಬಾತ ಅಗರವಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬ ಪಕ್ಕದ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಸಿಸಿಟಿವಿ ದೃಶ್ಯಾವಳಿಯಲ್ಲಿ, ಇಬ್ಬರೂ 13ನೇ ಮಹಡಿಗೆ ಹೋಗಿ ಸಂಜೆ 5:02ಕ್ಕೆ ಹೊರಬರುವುದು ಕಂಡುಬಂದಿದೆ. ಈ ಇಬ್ಬರು ಆರೋಪಿಗಳು ಕೊಲೆ ಮಾಡಿ ರಾಂಚಿಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಅಗರವಾಲ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹರ್ಷ ಎಂಬಾತ ಜಾರ್ಖಂಡ್ ಮೂಲದವನಾಗಿದ್ದು, 10 ದಿನಗಳ ಹಿಂದಷ್ಟೇ ಕೋಲ್ಕತ್ತಾದ ಏಜೆನ್ಸಿ ಮೂಲಕ ಕೆಲಸಕ್ಕೆ ಸೇರಿದ್ದ. ರೌಶನ್ ಎಂಬಾತ 14ನೇ ಮಹಡಿಯಲ್ಲಿರುವ ಅವರ ನೆರೆಮನೆಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರೂ ರೌಶನ್‌ನ ಮಾಲೀಕರ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುವುದು ಕಂಡುಬಂದಿದೆ.
ರೇಣು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಕಟ್‌ಪಲ್ಲಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿ, ವಿಧಿವಿಜ್ಞಾನ ಸಾಕ್ಷ್ಯ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸುತ್ತಿದ್ದಾರೆ.