ಗಾಜಾಪಟ್ಟಿ: ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು ನಿರ್ಮಿಸಿದ್ದ ಬೃಹತ್ ಮತ್ತು ಸಂಕೀರ್ಣವಾದ ಸುರಂಗ ಜಾಲವನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಪತ್ತೆ ಹಚ್ಚಿವೆ. ಇಸ್ರೇಲ್ ಸೈನಿಕ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಅವರ ಮೃತದೇಹವನ್ನು ಬಚ್ಚಿಡಲು ಈ ಸುರಂಗವನ್ನು ಬಳಸಲಾಗಿತ್ತು ಎಂಬ ಸ್ಫೋಟಕ ಮಾಹಿತಿಯೂ ಹೊರಬಿದ್ದಿದೆ.
ಸುರಂಗದ ವಿಶೇಷತೆಗಳೇನು?
ಐಡಿಎಫ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಸುರಂಗವು ಗಾಜಾದ ಅತಿದೊಡ್ಡ ಮತ್ತು ಅತ್ಯಂತ ಸುಸಜ್ಜಿತ ಭೂಗತ ಮಾರ್ಗಗಳಲ್ಲಿ ಒಂದಾಗಿದೆ. ಸುಮಾರು 7 ಕಿಲೋಮೀಟರ್‌ಗೂ ಹೆಚ್ಚು ಉದ್ದವಿರುವ ಈ ಸುರಂಗವು ಭೂಮಿಯ ಅಡಿಯಲ್ಲಿ 25 ಮೀಟರ್ ಆಳದಲ್ಲಿದೆ. ಇದರಲ್ಲಿ ಸುಮಾರು 80 ಕೊಠಡಿಗಳಿವೆ. ಇವುಗಳನ್ನು ಹಮಾಸ್ ಕಮಾಂಡರ್‌ಗಳು ಶಸ್ತ್ರಾಸ್ತ್ರಗಳ ಸಂಗ್ರಹಣೆ, ದಾಳಿಗಳ ಯೋಜನೆ ಮತ್ತು ದೀರ್ಘಕಾಲ ಉಳಿದುಕೊಳ್ಳಲು ಬಳಸುತ್ತಿದ್ದರು.

ಜನನಿಬಿಡ ರಫಾ (Rafah) ಪ್ರದೇಶದ ಅಡಿಯಲ್ಲಿ ಹಾದುಹೋಗುವ ಈ ಸುರಂಗವು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ ಕಚೇರಿಗಳು, ಮಸೀದಿಗಳು, ಆಸ್ಪತ್ರೆಗಳು ಮತ್ತು ಶಾಲೆಗಳ ಕೆಳಗಿದೆ ಎಂದು ಇಸ್ರೇಲ್ ಆರೋಪಿಸಿದೆ.
ಹದರ್ ಗೋಲ್ಡಿನ್ ಹಿನ್ನೆಲೆ
2014ರ ಇಸ್ರೇಲ್-ಹಮಾಸ್ ಯುದ್ಧದ ಸಂದರ್ಭದಲ್ಲಿ ನಡೆದ ದಾಳಿಯಲ್ಲಿ ಲೆಫ್ಟಿನೆಂಟ್ ಹದರ್ ಗೋಲ್ಡಿನ್ ಸಾವನ್ನಪ್ಪಿದ್ದರು. ಅವರ ಮೃತದೇಹವನ್ನು ಹಮಾಸ್ ಉಗ್ರರು ಅಪಹರಿಸಿ ಈ ಸುರಂಗದಲ್ಲಿ ಬಚ್ಚಿಟ್ಟಿದ್ದರು. ಇತ್ತೀಚೆಗೆ ನಡೆಸಲಾದ ಕಾರ್ಯಾಚರಣೆಯಲ್ಲಿ ಇಸ್ರೇಲ್ ಸೇನೆಯು 11 ವರ್ಷಗಳ ನಂತರ ಗೋಲ್ಡಿನ್ ಅವರ ಅವಶೇಷಗಳನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಪ್ರಮುಖ ಬಂಧನ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮರ್ವಾನ್ ಅಲ್-ಹಮ್ಸ್ ಎಂಬ ಹಮಾಸ್ ಸದಸ್ಯನನ್ನು ಬಂಧಿಸಲಾಗಿದೆ. ಈತ ಹದರ್ ಗೋಲ್ಡಿನ್ ಸಾವಿಗೆ ಕಾರಣವಾದ ಘಟನೆಗಳಲ್ಲಿ ಭಾಗಿಯಾಗಿದ್ದನಲ್ಲದೆ, ಅವರ ಮೃತದೇಹವನ್ನು ಹೂತುಹಾಕಿದ್ದ ಸ್ಥಳದ ಬಗ್ಗೆ ಮಾಹಿತಿ ಹೊಂದಿದ್ದ ಎಂದು ಸೇನೆ ತಿಳಿಸಿದೆ. ಹಮಾಸ್‌ನ ಹಿರಿಯ ನಾಯಕರು, ಮೇ ತಿಂಗಳಲ್ಲಿ ಹತ್ಯೆಯಾದ ಮುಹಮ್ಮದ್ ಶಬಾನಾ ಸೇರಿದಂತೆ ಹಲವರು ಈ ಸುರಂಗವನ್ನು ಕಮಾಂಡ್ ಪೋಸ್ಟ್ ಆಗಿ ಬಳಸುತ್ತಿದ್ದರು ಎಂಬುದು ತನಿಖೆಯಿಂದ ದೃಢಪಟ್ಟಿದೆ.
ಇದನ್ನೂ ಓದಿ: ಮೆಕ್ಸಿಕೋದ ಫಾತಿಮಾ ಬಾಷ್ ಮುಡಿಗೆ 2025ರ ‘ಮಿಸ್ ಯೂನಿವರ್ಸ್’ ಕಿರೀಟ



















