ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನ್ನು ಭರ್ಜರಿಯಾಗಿ ಗೆದ್ದಿದೆ. ಈ ಗೆಲುವಿನ ಮೂಲಕ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯಕ್ಕೆ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.
2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಪಾಯಿಂಟ್ ಪಟ್ಟಿಯಲ್ಲಿ ಈಗ ಭಾರತ ತಂಡ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಬಾಂಗ್ಲಾ ವಿರುದ್ಧದ ಗೆಲುವಿನ ನಂತರ ಭಾರತ ತಂಡ ಗೆಲುವಿನ ಶೇಕಡಾವಾರು 71.67 ರೊಂದಿಗೆ ಅಗ್ರ ಸ್ಥಾನದಲ್ಲಿದೆ.
ಮೂರನೇ ಆವೃತ್ತಿಯ ಡಬ್ಲ್ಯುಟಿಸಿಯಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು 1-0 ಅಂತರದಲ್ಲಿ ಹಾಗೂ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಸೋಲಿಸಿದೆ. ಈಗ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 1-0 ಅಂತರದಿಂದ ಸೋಲಿಸಿ ಮುನ್ನಡೆ ಕಾಯ್ದುಕೊಂಡಿದೆ. ಅಲ್ಲದೇ, ಭಾರತ ತಂಡ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧ 1, ನ್ಯೂಜಿಲೆಂಡ್ ವಿರುದ್ಧ 3 ಹಾಗೂ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಮಾತ್ರ 1-1 ರಿಂದ ಸರಣಿ ಡ್ರಾ ಮಾಡಿಕೊಂಡಿದೆ. ಉಳಿದಂತೆ ಎಲ್ಲ ಟೂರ್ನಿಗಳಲ್ಲಿ ಭಾರತ ಗೆದ್ದಿದೆ.
ಸದ್ಯದ ಮಾಹಿತಿಯಂತೆ ಭಾರತ ತಂಡವು ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಫೈನಲ್ ತಲುಪಬೇಕಾದರೆ ಮುಂದಿನ 9 ಪಂದ್ಯಗಳಲ್ಲಿ ಕನಿಷ್ಠ 6 ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಈ ಪೈಕಿ ಭಾರತ ತನ್ನ ತವರು ನೆಲದಲ್ಲಿ ಬಾಂಗ್ಲಾದೇಶ ವಿರುದ್ಧ 1 ಮತ್ತು ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ನಂತರ ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ ಪಂದ್ಯ ಆಡಲಿದೆ. ಫೈನಲ್ ಗೆ ತಲುಪಲು ಭಾರತ ತಂಡವು ಪಟ್ಟಿಯಲ್ಲಿ ಅಗ್ರ-2 ರಲ್ಲಿ ಇರಲೇಬೇಕು. ಹೀಗಾಗಿ ಭಾರತ 5 ಪಂದ್ಯ ಗೆದ್ದು 1 ಪಂದ್ಯ ಡ್ರಾ ಮಾಡಿಕೊಂಡರೂ ಫೈನಲ್ ಪ್ರವೇಶ ಮಾಡಬಹುದು.
ಈಗ ಆಸ್ಟ್ರೇಲಿಯಾ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಫೈನಲ್ ತಲುಪಲು ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆಲ್ಲಬೇಕು ಅಥವಾ 3 ಪಂದ್ಯಗಳನ್ನು ಗೆದ್ದು 1 ಪಂದ್ಯ ಡ್ರಾ ಮಾಡಿಕೊಳ್ಳಬೇಕು. ನ್ಯೂಜಿಲೆಂಡ್ ತಂಡ ಉಳಿದ 8 ಪಂದ್ಯಗಳ ಪೈಕಿ ಕನಿಷ್ಠ 6 ಪಂದ್ಯ ಗೆಲ್ಲಬೇಕು. ಅಥವಾ 5 ಪಂದ್ಯಗಳನ್ನು ಗೆದ್ದು 1 ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕು.