ನವದೆಹಲಿ: ದೆಹಲಿ ಸಮೀಪದ ಫರಿದಾಬಾದ್‌ನಲ್ಲಿ ಜಮ್ಮು-ಕಾಶ್ಮೀರದ ವೈದ್ಯನಿಂದ ವಶಪಡಿಸಿಕೊಳ್ಳಲಾಗಿರುವ 350 ಕೆಜಿ ಅಮೋನಿಯಂ ನೈಟ್ರೇಟ್ ದೇಶವನ್ನೇ ಬೆಚ್ಚಿಬೀಳಿಸಿದೆ. ವಾಸನೆರಹಿತ, ಬಿಳಿ ಹರಳಿನಂತಹ ಈ ರಾಸಾಯನಿಕವು ಪ್ರಬಲ ಆಕ್ಸಿಡೈಸರ್ ಆಗಿದ್ದು, ಸರಿಯಾದ ಪರಿಸ್ಥಿತಿಗಳಲ್ಲಿ ಭಾರಿ ಸ್ಫೋಟವನ್ನು ಉಂಟುಮಾಡುವ ಸಾಮರ್ಥ್ಯ ಹೊಂದಿದೆ. ಮೂಲಗಳ ಪ್ರಕಾರ, ವಶಪಡಿಸಿಕೊಂಡಿರುವ ಈ ರಾಸಾಯನಿಕವನ್ನು ಸ್ಫೋಟಿಸಿದ್ದರೆ, ಅದರ ಪರಿಣಾಮವು 50 ರಿಂದ 100 ಮೀಟರ್‌ಗಳಷ್ಟು ವ್ಯಾಪಿಸಬಹುದಿತ್ತು. ಸ್ಫೋಟದ ಕೇಂದ್ರದಿಂದ ಮೂರನೇ ಒಂದು ಭಾಗದಷ್ಟು ಪ್ರದೇಶದಲ್ಲಿ ‘ಸಂಪೂರ್ಣ ವಿನಾಶ’ ಸಂಭವಿಸುವ ಸಾಧ್ಯತೆಯಿತ್ತು.
ಏನಿದು ಅಮೋನಿಯಂ ನೈಟ್ರೇಟ್?
ಸರಳವಾಗಿ ಹೇಳುವುದಾದರೆ, ಇದು ಅಮೋನಿಯಾ (NH3) ಮತ್ತು ನೈಟ್ರಿಕ್ ಆಮ್ಲ (HNO3) ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಳ್ಳುವ ಒಂದು ರೀತಿಯ ಉಪ್ಪು. ಇದರ ರಾಸಾಯನಿಕ ಸೂತ್ರ NH4NO3. ಇದರಲ್ಲಿ ಅಮೋನಿಯಂ ಮತ್ತು ನೈಟ್ರೇಟ್ ಅಂಶ ಅಧಿಕವಾಗಿರುವುದರಿಂದ, ಇದನ್ನು ಕೃಷಿ ವಲಯದಲ್ಲಿ ಅತ್ಯಂತ ಪರಿಣಾಮಕಾರಿ ರಸಗೊಬ್ಬರವಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ವಿಶ್ವದ ಬಹುತೇಕ ಆಹಾರ ಪೂರೈಕೆಯು ಇಂದಿಗೂ ನೈಟ್ರೇಟ್ ಆಧಾರಿತ ರಸಗೊಬ್ಬರಗಳನ್ನೇ ಅವಲಂಬಿಸಿದೆ.

ಸ್ಫೋಟಗೊಳ್ಳುವುದು ಹೇಗೆ?
ಅಮೋನಿಯಂ ನೈಟ್ರೇಟ್ ಎರಡು ರೀತಿಯಲ್ಲಿ ಸ್ಫೋಟಗೊಳ್ಳಬಹುದು. ಮೊದಲನೆಯದಾಗಿ, ಇದು ಬೆಂಕಿಗೆ ಒಡ್ಡಿಕೊಂಡಾಗ ಅಥವಾ ಬೆಂಕಿಯ ಸಮಯದಲ್ಲಿ ದಹನಕಾರಿ ವಸ್ತುವಿನೊಂದಿಗೆ ಬೆರೆತಾಗ. 2020ರ ಆಗಸ್ಟ್‌ನಲ್ಲಿ ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಸಂಭವಿಸಿದ ದುರಂತ ಇದಕ್ಕೆ ಭಯಾನಕ ಉದಾಹರಣೆಯಾಗಿದೆ. ಅಲ್ಲಿನ ಬಂದರು ಗೋದಾಮಿನಲ್ಲಿ ಆರು ವರ್ಷಗಳಿಂದ ಸಂಗ್ರಹಿಸಿಟ್ಟಿದ್ದ 3,000 ಟನ್ ಅಮೋನಿಯಂ ನೈಟ್ರೇಟ್‌ಗೆ ಬೆಂಕಿ ತಗುಲಿ, ಸಂಭವಿಸಿದ ಸ್ಫೋಟದಲ್ಲಿ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 6,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಇದೇ ರೀತಿ 2015ರಲ್ಲಿ ಚೀನಾದ ಟಿಯಾಂಜಿನ್ ಬಂದರಿನಲ್ಲಿ ಸುಮಾರು 800 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡು 173 ಜನರು ಮೃತಪಟ್ಟಿದ್ದರು.
ಎರಡನೆಯ ವಿಧಾನವೆಂದರೆ, ಇದನ್ನು ಬೇರೊಂದು ಸ್ಫೋಟಕ ವಸ್ತುವಿನೊಂದಿಗೆ ಬೆರೆಸುವುದು. ಆಗ ಇದು ಕಡಿಮೆ ವೆಚ್ಚದ, ಆದರೆ ಅತಿ ಹೆಚ್ಚು ಹಾನಿ ಉಂಟುಮಾಡುವ ಬಾಂಬ್ ಆಗಿ ಪರಿವರ್ತನೆಯಾಗುತ್ತದೆ. ಇದನ್ನು ಎಎನ್‌ಎಫ್‌ಒ (ANFO – Ammonium Nitrate Fuel Oil) ಎಂದು ಕರೆಯಲಾಗುತ್ತದೆ. ಇದನ್ನು ಗಣಿಗಾರಿಕೆ ಮತ್ತು ನಿರ್ಮಾಣದಂತಹ ಕೈಗಾರಿಕೆಗಳಲ್ಲಿ ನಿಯಂತ್ರಿತ ಸ್ಫೋಟಗಳಿಗೆ ಬಳಸಲಾಗುತ್ತದೆ. ಶುದ್ಧ ಅಮೋನಿಯಂ ನೈಟ್ರೇಟ್ ಸ್ವತಃ ಸ್ಫೋಟಕವಲ್ಲ. ಅದನ್ನು ಸುರಕ್ಷಿತವಾಗಿ, ಅಧಿಕ ಉಷ್ಣತೆಯಿಂದ ದೂರವಿಟ್ಟರೆ, ಬೆಂಕಿ ಹೊತ್ತಿಸುವುದು ಕಷ್ಟ. ಆದರೆ, ತಪ್ಪಾದ ಸಂಗ್ರಹಣೆಯಿಂದಾಗಿ ಅದು ವೇಗವಾಗಿ ಹಾಳಾಗಿ ಬೈರುತ್‌ನಂತಹ ಕೈಗಾರಿಕಾ ಅಪಘಾತಗಳಿಗೆ ಕಾರಣವಾಗಬಹುದು.
ಭಾರತದಲ್ಲಿನ ನಿಯಮಗಳೇನು?
ಭಾರತದಲ್ಲಿ ಅಮೋನಿಯಂ ನೈಟ್ರೇಟ್ ಮಾರಾಟವನ್ನು ನಿಯಂತ್ರಿಸಲಾಗಿದೆ. 1884ರ ಸ್ಫೋಟಕ ಕಾಯ್ದೆಯ ಅಡಿಯಲ್ಲಿ 2012ರಲ್ಲಿ ರೂಪಿಸಲಾದ ನಿಯಮಗಳ ಪ್ರಕಾರ, “ಶೇ. 45ಕ್ಕಿಂತ ಹೆಚ್ಚು ಅಮೋನಿಯಂ ನೈಟ್ರೇಟ್ ಹೊಂದಿರುವ ಯಾವುದೇ ಮಿಶ್ರಣವನ್ನು ಸ್ಫೋಟಕ” ಎಂದು ಪರಿಗಣಿಸಲಾಗುತ್ತದೆ. ಈ ರಾಸಾಯನಿಕವನ್ನು ತಯಾರಿಸಲು, ನಿರ್ವಹಿಸಲು, ಸಂಗ್ರಹಿಸಲು, ಸಾಗಿಸಲು ಮತ್ತು ಮಾರಾಟ ಮಾಡಲು ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ. ಜನವಸತಿ ಪ್ರದೇಶಗಳಲ್ಲಿ ಇದನ್ನು ಸಂಗ್ರಹಿಸುವುದರ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳಿವೆ ಮತ್ತು ಇದರ ಆಮದು ಹಾಗೂ ರಫ್ತನ್ನು ಸಹ ನಿಯಂತ್ರಿಸಲಾಗುತ್ತದೆ.
ಇದನ್ನೂ ಓದಿ: ಬಿಬಿಸಿ ಮುಖ್ಯಸ್ಥರ ರಾಜೀನಾಮೆ: ‘ಟ್ರಂಪ್ ಸಾಕ್ಷ್ಯಚಿತ್ರ’ದ ಹಿಂದಿನ ವಿವಾದವೇನು?



















