ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್ ಪ್ರವಾಸದಲ್ಲಿದ್ದು, ಮುಂಬೈ-ಅಹಮದಾಬಾದ್ ಬುಲೆಟ್ ಟ್ರೇನ್ ಯೋಜನೆಗೆ ಸಂಬಂಧಿಸಿದಂತೆ ಜಪಾನ್ ಪ್ರಧಾನಿ ಶಿರು ಇಶಿಬಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿ ತರಲಿರುವ ಈ ಯೋಜನೆಯ ಹಿಂದೆ, ಒಂದು ಹಕ್ಕಿಯಿಂದ ಪ್ರೇರಿತವಾದ ಅದ್ಭುತ ತಂತ್ರಜ್ಞಾನದ ಕಥೆಯಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ.
ಬುಲೆಟ್ ಟ್ರೇನ್ ಎದುರಿಸಿದ ದೊಡ್ಡ ಸವಾಲು
1964ರ ಟೋಕಿಯೋ ಒಲಿಂಪಿಕ್ಸ್ ಸಮಯದಲ್ಲಿ ಜಪಾನ್‌ನ ಶಿಂಕನ್‌ಸೆನ್ ಬುಲೆಟ್ ಟ್ರೇನ್ ಜಗತ್ತಿಗೆ ಪರಿಚಯವಾದಾಗ, ಅದು ತನ್ನ ವೇಗ ಮತ್ತು ದಕ್ಷತೆಯಿಂದ ಜಗತ್ತನ್ನು ಬೆರಗುಗೊಳಿಸಿತ್ತು. ಆದರೆ, ಈ ತಾಂತ್ರಿಕ ಅದ್ಭುತವು ಒಂದು ದೊಡ್ಡ ಸಮಸ್ಯೆಯನ್ನು ಎದುರಿಸಿತು. ಅದುವೇ ಶಬ್ದ ಮಾಲಿನ್ಯ.

ಗಂಟೆಗೆ 300 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುವ ಈ ರೈಲುಗಳು ಸುರಂಗಗಳಿಂದ ಹೊರಬಂದಾಗ, ಬಂದೂಕಿನಿಂದ ಗುಂಡು ಹಾರಿದಂತೆ ಕಿವಿಗಡಚಿಕ್ಕುವ ಶಬ್ದ “ಸಾನಿಕ್ ಬೂಮ್” ಸೃಷ್ಟಿಯಾಗುತ್ತಿತ್ತು. ಸುರಂಗಗಳ 400 ಮೀಟರ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಈ ಶಬ್ದವು ಅಸಹನೀಯವಾಗಿತ್ತು. ಈ ಸಮಸ್ಯೆಗೆ ಕಾರಣ ಏರೋಡೈನಾಮಿಕ್ಸ್ – ಸುರಂಗದೊಳಗೆ ಸಂಕುಚಿತಗೊಂಡ ಗಾಳಿಯು ರೈಲು ಹೊರಬಂದಾಗ ಒಮ್ಮೆಲೇ ಸ್ಫೋಟಗೊಳ್ಳುತ್ತಿತ್ತು. ಈ ಶಬ್ದ ಮಾಲಿನ್ಯದಿಂದಾಗಿ, ಜಪಾನ್‌ನ ಹೆಮ್ಮೆಯ ಸಾರಿಗೆ ಯೋಜನೆಯೇ ಸ್ಥಗಿತಗೊಳ್ಳುವ ಅಪಾಯದಲ್ಲಿತ್ತು.
ಪ್ರಕೃತಿಯಿಂದ ಸಿಕ್ಕ ಪರಿಹಾರ
ಈ ಸಮಸ್ಯೆಗೆ ಪರಿಹಾರ ಹುಡುಕಲು, ಜಪಾನ್ ರೈಲ್ವೆಯ ತಾಂತ್ರಿಕ ಅಭಿವೃದ್ಧಿ ವಿಭಾಗದ ಜನರಲ್ ಮ್ಯಾನೇಜರ್ ಮತ್ತು ಪಕ್ಷಿ ವೀಕ್ಷಕರಾಗಿದ್ದ ಇಜಿ ನಕಾಟ್ಸು ಅವರು ಪ್ರಕೃತಿಯ ಮೊರೆ ಹೋದರು. ಅವರಿಗೆ ಕಿಂಗ್‌ಫಿಶರ್ (Kingfisher) ಹಕ್ಕಿ ನೆನಪಾಯಿತು. ಈ ಹಕ್ಕಿಯು ನೀರಿಗೆ ಅತಿ ವೇಗವಾಗಿ ಧುಮುಕಿದರೂ, ಸ್ವಲ್ಪವೂ ನೀರು ಸಿಡಿಯದಂತೆ ತನ್ನ ಬೇಟೆಯನ್ನು ಹಿಡಿಯುತ್ತದೆ. ಅದರ ಉದ್ದವಾದ, ಚೂಪಾದ ಕೊಕ್ಕು ಗಾಳಿ ಮತ್ತು ನೀರಿನಂತಹ ಎರಡು ವಿಭಿನ್ನ ಮಾಧ್ಯಮಗಳ ಮೂಲಕ ಸುಲಭವಾಗಿ ಚಲಿಸಲು ಸಹಾಯ ಮಾಡುತ್ತದೆ ಎಂಬುದನ್ನು ಅವರು ಗಮನಿಸಿದ್ದರು.
ಈ “ಬಯೋಮಿಮಿಕ್ರಿ” (ಪ್ರಕೃತಿಯನ್ನು ಅನುಕರಿಸುವ ವಿಜ್ಞಾನ) ತತ್ವವನ್ನು ಬಳಸಿ, ನಕಾಟ್ಸು ಅವರು ಬುಲೆಟ್ ಟ್ರೇನ್‌ನ ಮುಂಭಾಗವನ್ನು ಕಿಂಗ್‌ಫಿಶರ್‌ನ ಕೊಕ್ಕಿನ ಆಕಾರದಲ್ಲಿ ಮರುವಿನ್ಯಾಸಗೊಳಿಸಿದರು. ಈ ಬದಲಾವಣೆಯಿಂದಾಗಿ ಭಯಾನಕವಾದ “ಸಾನಿಕ್ ಬೂಮ್” ಶಬ್ದ ಸಂಪೂರ್ಣವಾಗಿ ನಿಂತುಹೋಯಿತು. ರೈಲಿನ ಇಂಧನ ದಕ್ಷತೆ ಹೆಚ್ಚಾಯಿತು. ರೈಲು ಗಂಟೆಗೆ 320 ಕಿ.ಮೀ. ವೇಗದಲ್ಲಿ ಚಲಿಸಲು ಸಾಧ್ಯವಾಯಿತು. ಒಟ್ಟಿನಲ್ಲಿ ಈ ಒಂದು ಆವಿಷ್ಕಾರವು ಜಪಾನ್‌ನ ಬುಲೆಟ್ ಟ್ರೇನ್ ಯೋಜನೆಯನ್ನೇ ಉಳಿಸಿತು.
ಭಾರತದ ಯೋಜನೆಗೆ ಅದೇ ತಂತ್ರಜ್ಞಾನ
ಇಂದು, ಅದೇ ಕಿಂಗ್‌ಫಿಶರ್-ಪ್ರೇರಿತ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗೆ ಶಕ್ತಿ ತುಂಬುತ್ತಿದೆ. 508 ಕಿ.ಮೀ. ಉದ್ದದ ಈ ಯೋಜನೆಗೆ ಜಪಾನ್‌ನ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ವಿಶೇಷವೆಂದರೆ, ಭಾರತಕ್ಕೆ ಹಳೆಯ ಇ5 ಸರಣಿಯ ರೈಲುಗಳನ್ನು ನೀಡುವ ಬದಲು, ಜಪಾನ್ ತನ್ನ ಇತ್ತೀಚಿನ ಮತ್ತು ಅತ್ಯಾಧುನಿಕವಾದ ಇ10 ಶಿಂಕನ್‌ಸೆನ್ ರೈಲುಗಳನ್ನು ನೀಡಲು ಒಪ್ಪಿಕೊಂಡಿದೆ. ಈ ಹೊಸ ತಲೆಮಾರಿನ ರೈಲುಗಳ ಪರೀಕ್ಷೆಯು 2026ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದ್ದು, 2027ರ ವೇಳೆಗೆ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ಭಾರತ-ಜಪಾನ್ ಸ್ನೇಹದ ಸಂಕೇತವಾಗಿದೆ.