ನವದೆಹಲಿ : ಹಿಂದುಜಾ ಗ್ರೂಪ್‌ನ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ ಲಂಡನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ವ್ಯವಹಾರ ವಲಯದಲ್ಲಿ ‘ಜಿಪಿ’ ಎಂದೇ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಗೋಪಿಚಂದ್ ಪಿ. ಹಿಂದೂಜಾ ಅವರು, ಕಳೆದ ಕೆಲವು ವಾರಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಹಿಂದೂಜಾ ಕುಟುಂಬದ ಎರಡನೇ ತಲೆಮಾರಿಗೆ ಸೇರಿದ ಗೋಪಿಚಂದ್ ಅವರು, ಮೇ 2023ರಲ್ಲಿ ತಮ್ಮ ಹಿರಿಯ ಸಹೋದರ ಶ್ರೀಚಂದ್ ಅವರ ಮರಣದ ನಂತರ ಹಿಂದುಜಾ ಗ್ರೂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಗೋಪಿಚಂದ್ ಹಿಂದುಜಾ ಅವರು ಪತ್ನಿ ಸುನೀತಾ, ಪುತ್ರರಾದ ಸಂಜಯ್ ಮತ್ತು ಧೀರಜ್ ಹಾಗೂ ಮಗಳು ರೀಟಾ ಅವರನ್ನು ಅಗಲಿದ್ದಾರೆ.
ಬಾಂಬೆ ಜೈ ಹಿಂದ್ ಕಾಲೇಜಿನಿಂದ ಪದವಿ ಪಡೆದ ಗೋಪಿಚಂದ್, ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯ ಮತ್ತು ರಿಚ್ಮಂಡ್ ಕಾಲೇಜಿನಿಂದ ಗೌರವ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದರು.
ಇನ್ನು ಹಿಂದುಜಾ ಗ್ರೂಪ್ ಆಟೋಮೋಟಿವ್, ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಆರೋಗ್ಯ ರಕ್ಷಣೆ, ರಿಯಲ್ ಎಸ್ಟೇಟ್, ವಿದ್ಯುತ್, ಮಾಧ್ಯಮ ಮತ್ತು ಮನರಂಜನೆ ಸೇರಿದಂತೆ ಹನ್ನೊಂದು ವಲಯಗಳಲ್ಲಿ ವ್ಯವಹಾರಗಳನ್ನು ಹೊಂದಿದೆ. ಅದರ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳಲ್ಲಿ ಅಶೋಕ್ ಲೇಲ್ಯಾಂಡ್, ಇಂಡಸ್ಇಂಡ್ ಬ್ಯಾಂಕ್ ಮತ್ತು NXTDIGITAL ಲಿಮಿಟೆಡ್ ಸೇರಿವೆ.
ಇದನ್ನೂ ಓದಿ : ‘ಕಡಲ ಮಕ್ಕಳಿ’ಗೆ ಭರ್ಜರಿ ಮತ್ಸ್ಯ ಬೇಟೆ | ಕಾರವಾರದಲ್ಲಿ ಬಲೆಗೆ ಬಿದ್ದ ರಾಶಿ ರಾಶಿ ಭೂತಾಯಿ ಮೀನು!



















