ಢಾಕಾ/ನವದೆಹಲಿ : ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದಾಳಿ ಮತ್ತು ದೌರ್ಜನ್ಯ ಪ್ರಕರಣಗಳು ಸದ್ಯಕ್ಕೆ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಫೆನಿ ಜಿಲ್ಲೆಯಲ್ಲಿ ನಡೆದ ಮತ್ತೊಂದು ಆಘಾತಕಾರಿ ಘಟನೆಯಲ್ಲಿ 28 ವರ್ಷದ ಹಿಂದೂ ಆಟೋ ಚಾಲಕರೊಬ್ಬರನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಲಾಗಿದೆ. ಈ ಮೂಲಕ ಕಳೆದ 42 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹತ್ಯೆಯಾದ ಹಿಂದೂಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.
ಭಾರತ ವಿರೋಧಿ ವಿದ್ಯಾರ್ಥಿ ನಾಯಕ ಷರೀಫ್ ಒಸ್ಮಾನ್ ಹಾದಿ ಸಾವಿನ ನಂತರ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಅಶಾಂತಿ ಭುಗಿಲೆದ್ದಿದ್ದು, ಇದರ ನೇರ ಪರಿಣಾಮ ಅಲ್ಲಿನ ಹಿಂದೂ ಅಲ್ಪಸಂಖ್ಯಾತರ ಮೇಲೆ ಆಗುತ್ತಿದೆ.
ದರೋಡೆ ಮತ್ತು ಹತ್ಯೆ
ಹತ್ಯೆಯಾದ ವ್ಯಕ್ತಿಯನ್ನು ಫೆನಿ ಜಿಲ್ಲೆಯ ದಗೊನ್ ಭುಯಾನ್ ಪ್ರದೇಶದ ಸಮೀರ್ ಕುಮಾರ್ ದಾಸ್ (28) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ಸಮೀರ್ ಅವರನ್ನು ದುಷ್ಕರ್ಮಿಗಳ ಗುಂಪೊಂದು ಅಮಾನವೀಯವಾಗಿ ಥಳಿಸಿ ಹತ್ಯೆ ಮಾಡಿದೆ. ಹಲ್ಲೆಯ ನಂತರ ಹಂತಕರು ಸಮೀರ್ ಅವರ ಆಟೋರಿಕ್ಷಾವನ್ನು ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಸಮೀರ್ ಅವರ ಮೃತದೇಹ ಉಪಜಿಲ್ಲಾ ಆಸ್ಪತ್ರೆಯ ಸಮೀಪ ಪತ್ತೆಯಾಗಿದೆ. ಈ ಕುರಿತು ಪ್ರಾಥಮಿಕ ತನಿಖೆ ನಡೆಸಿರುವ ಸ್ಥಳೀಯ ಪೊಲೀಸರು, ಇದೊಂದು ದರೋಡೆ ಮತ್ತು ಹತ್ಯೆ ಪ್ರಕರಣವಾಗಿರಬಹುದು ಎಂದು ಶಂಕಿಸಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದರೂ, ಈವರೆಗೂ ಯಾವುದೇ ಬಂಧನವಾಗಿರುವ ಬಗ್ಗೆ ವರದಿಯಾಗಿಲ್ಲ.
ಒಂದೇ ವಾರದಲ್ಲಿ ಸಾಲು ಸಾಲು ಸಾವುಗಳು
ಸಮೀರ್ ಕುಮಾರ್ ದಾಸ್ ಅವರ ಹತ್ಯೆಗೂ ಮುನ್ನ ನರಸಿಂಗಡಿ ಜಿಲ್ಲೆಯಲ್ಲಿ ಹಿಂದೂ ದಿನಸಿ ಅಂಗಡಿ ಮಾಲೀಕರೊಬ್ಬರ ಮೇಲೆ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಕಳೆದ ಒಂದು ವಾರದಲ್ಲೇ ಹಿಂಸಾಚಾರ ಮತ್ತು ಕಿರುಕುಳಕ್ಕೆ ಸಿಲುಕಿ ಇನ್ನೂ ಇಬ್ಬರು ಹಿಂದೂಗಳು ಪ್ರಾಣ ಕಳೆದುಕೊಂಡಿದ್ದಾರೆ.
ಸಿಲ್ಹೆಟ್ನಲ್ಲಿ ಮೊಬೈಲ್ ಕಂತಿನ ಹಣದ ವಿಚಾರವಾಗಿ ಉಂಟಾದ ಜಗಳದಲ್ಲಿ ಅವಮಾನಿತರಾದ ಜಾಯ್ ಮಹಾಪಾತ್ರ ಎಂಬುವವರು ವಿಷ ಸೇವಿಸಿ ಮೃತಪಟ್ಟಿದ್ದಾರೆ. ಕೇವಲ 500 ಟಾಕಾ (ಬಾಂಗ್ಲಾದೇಶದ ಕರೆನ್ಸಿ) ಕಂತಿನ ಬಾಕಿಗಾಗಿ ಅಂಗಡಿ ಮಾಲೀಕ ಅಮಿರಲ್ ಇಸ್ಲಾಂ ಎಂಬುವವರು ಜಾಯ್ ಅವರಿಗೆ ಥಳಿಸಿ, ಅವಮಾನಿಸಿದ್ದರು ಎಂದು ಅವರ ಕುಟುಂಬ ಆರೋಪಿಸಿದೆ. ಇದಲ್ಲದೆ, ವಾಯುವ್ಯ ಬಾಂಗ್ಲಾದೇಶದಲ್ಲಿ ಕಳ್ಳತನದ ಆರೋಪ ಹೊರಿಸಿ ಗುಂಪು ದಾಳಿ ನಡೆಸಿದಾಗ ತಪ್ಪಿಸಿಕೊಳ್ಳಲು ಕಾಲುವೆಗೆ ಹಾರಿದ ಮಿಥುನ್ ಸರ್ಕಾರ್ (25) ಎಂಬುವವರು ಸಾವನ್ನಪ್ಪಿದ್ದಾರೆ.
ದೌರ್ಜನ್ಯದ ಬಗ್ಗೆ ಕಳವಳ
ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯತಾ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ, ಕಳೆದ ಎರಡು ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಮಿತಿಮೀರಿದೆ. ಹಿಂದೂ ವಿಧವೆಯೊಬ್ಬರ ಮೇಲೆ ಅತ್ಯಾಚಾರ, ಚಿನ್ನದ ಅಂಗಡಿ ದರೋಡೆ ಮತ್ತು ವಾಯುವ್ಯ ಕುರಿಗ್ರಾಮ್ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದ ಹಿಂದೂ ಆಡಳಿತಾಧಿಕಾರಿಗೆ ಬೆದರಿಕೆ ಹಾಕಿದಂತಹ ಗಂಭೀರ ಪ್ರಕರಣಗಳು ವರದಿಯಾಗಿವೆ.
ಫೆ.12ರಂದು ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಶೇಖ್ ಹಸೀನಾ ಅವರ ಆಡಳಿತದ ಪತನದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮೊಹಮ್ಮದ್ ಯೂನುಸ್ ನೇತೃತ್ವದ ಹಂಗಾಮಿ ಸರ್ಕಾರ ಅಲ್ಪಸಂಖ್ಯಾತರ ಹತ್ಯೆಯನ್ನು ಖಂಡಿಸಿದೆಯಾದರೂ, ಈ ಘಟನೆಗಳನ್ನು “ಸಾಮುದಾಯಿಕ ದಾಳಿಗಳಲ್ಲ” ಎಂದು ಪದೇ ಪದೇ ಸಮರ್ಥಿಸಿಕೊಳ್ಳುತ್ತಿರುವುದು ಮತ್ತು ಸಾವಿನ ಸಂಖ್ಯೆಗಳನ್ನು “ಕೇವಲ ಅಪವಾದಗಳು” ಎಂದು ಕರೆದಿರುವುದು ಟೀಕೆಗೆ ಗುರಿಯಾಗಿದೆ.
ಇದನ್ನೂ ಓದಿ : ‘ಟಾಕ್ಸಿಕ್’ ಟೀಸರ್ ವಿವಾದ | ಸೆನ್ಸಾರ್ ಮಂಡಳಿಗೆ ಮಹಿಳಾ ಆಯೋಗ ಪತ್ರ.. ವರದಿ ಸಲ್ಲಿಸುವಂತೆ ಸೂಚನೆ!



















