ನವದೆಹಲಿ: ಈಗ ಹಿಮಾಚಲ ಪ್ರದೇಶವು ಭಾರತದ ನಾಲ್ಕನೇ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿ ಹೊರಹೊಮ್ಮಿದೆ. ಶೇಕಡಾ 99.3ರಷ್ಟು ಸಾಕ್ಷರತಾ ಪ್ರಮಾಣವನ್ನು ಸಾಧಿಸುವ ಮೂಲಕ, ರಾಷ್ಟ್ರೀಯ ಮಾನದಂಡವಾದ ಶೇ.95ಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಮಂಗಳವಾರ ಘೋಷಿಸಿದ್ದಾರೆ.
ಸೆಪ್ಟೆಂಬರ್ 8ರಂದು ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಅಂಗವಾಗಿ ನಡೆದ ‘ಉಲ್ಲಾಸ್’ (ULLAS – Understanding of Lifelong Learning for All in Society) ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಘೋಷಿಸಿದ್ದಾರೆ. “ಸ್ವಾತಂತ್ರ್ಯದ ಸಮಯದಲ್ಲಿ ಹಿಮಾಚಲ ಪ್ರದೇಶದ ಸಾಕ್ಷರತಾ ಪ್ರಮಾಣ ಕೇವಲ ಶೇ.7 ಇತ್ತು. 78 ವರ್ಷಗಳ ನಂತರ, ನಾವು ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದ್ದೇವೆ,” ಎಂದು ಸುಖು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಾಧನೆಯೊಂದಿಗೆ ಹಿಮಾಚಲ ಪ್ರದೇಶವು ಮಿಜೋರಾಂ, ತ್ರಿಪುರಾ ಮತ್ತು ಗೋವಾ ರಾಜ್ಯಗಳ ಸಾಲಿಗೆ ಸೇರಿದಂತಾಗಿದೆ.
ಸಂಪೂರ್ಣ ಸಾಕ್ಷರತೆ ಸಾಧಿಸಿದ ಇತರ ರಾಜ್ಯಗಳು:
ಮಿಜೋರಾಂ: ಮೇ 20, 2025ರಂದು ಭಾರತದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವೆಂಬ ಹೆಗ್ಗಳಿಕೆಗೆ ಮಿಜೋರಾಂ ಪಾತ್ರವಾಯಿತು. 2023-24ರ ಸಮೀಕ್ಷೆಯ ಪ್ರಕಾರ, ಮಿಜೋರಾಂನ ಸಾಕ್ಷರತಾ ಪ್ರಮಾಣ ಶೇ.98.2ರಷ್ಟಿದೆ.
ಗೋವಾ: ‘ಉಲ್ಲಾಸ್’ ಉಪಕ್ರಮದ ಅಡಿಯಲ್ಲಿ ಶೇ.100ರಷ್ಟು ಸಾಕ್ಷರತೆ ಸಾಧಿಸಿ, ದೇಶದ ಎರಡನೇ ಸಂಪೂರ್ಣ ಸಾಕ್ಷರತಾ ರಾಜ್ಯವೆಂದು ಅಧಿಕೃತವಾಗಿ ಘೋಷಿಸಲಾಯಿತು.
ತ್ರಿಪುರಾ: ಮಿಜೋರಾಂ ಮತ್ತು ಗೋವಾದ ನಂತರ, ಶೇ.95.6ರಷ್ಟು ಸಾಕ್ಷರತಾ ಪ್ರಮಾಣದೊಂದಿಗೆ ತ್ರಿಪುರಾ ಈ ಪಟ್ಟಿಗೆ ಸೇರಿದ ಮೂರನೇ ರಾಜ್ಯವಾಗಿದೆ.
ಲಡಾಖ್ ಮೊದಲ ಕೇಂದ್ರಾಡಳಿತ ಪ್ರದೇಶ:
ಕೇಂದ್ರಾಡಳಿತ ಪ್ರದೇಶಗಳ ಪೈಕಿ ಲಡಾಖ್, ಶೇ. 97ರಷ್ಟು ಸಾಕ್ಷರತೆ ಸಾಧಿಸುವ ಮೂಲಕ ಈ ಮೈಲಿಗಲ್ಲನ್ನು ತಲುಪಿದ ಮೊದಲ ಪ್ರದೇಶವಾಗಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಬಿ.ಡಿ. ಮಿಶ್ರಾ ಘೋಷಿಸಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪ್ರಕಾರ, ಭಾರತದ ಒಟ್ಟಾರೆ ಸಾಕ್ಷರತಾ ಪ್ರಮಾಣವು 2011ರಲ್ಲಿ ಶೇ. 74ರಿಂದ 2023-24ರಲ್ಲಿ ಶೇ.80.9ಕ್ಕೆ ಏರಿಕೆಯಾಗಿದೆ.