ನವದೆಹಲಿ: ದೇಶದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೊಕಾರ್ಪ್, ತಾನು ಅತ್ಯಂತ ಮಹತ್ವಾಕಾಂಕ್ಷೆಯಿಂದ ಮಾರುಕಟ್ಟೆಗೆ ಪರಿಚಯಿಸಿದ್ದ ‘ಮಾವ್ರಿಕ್ 440’ ಬೈಕಿನ ಉತ್ಪಾದನೆ ಮತ್ತು ಮಾರಾಟವನ್ನು ಸ್ಥಗಿತಗೊಳಿಸಿದೆ. ಫೆಬ್ರವರಿ 2024ರಲ್ಲಿ 1.99 ಲಕ್ಷ ರೂಪಾಯಿ ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾಗಿದ್ದ ಈ ಬೈಕ್, ಭಾರತದ ಮಧ್ಯಮ ಸಾಮರ್ಥ್ಯದ ಮೋಟಾರ್ಸೈಕಲ್ ವಿಭಾಗಕ್ಕೆ ಹೀರೋ ಇಟ್ಟ ದಿಟ್ಟ ಹೆಜ್ಜೆಯಾಗಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗದೆ ಮತ್ತು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾದ ಕಾರಣ, ಎರಡು ವರ್ಷ ತುಂಬುವ ಮೊದಲೇ ಕಂಪನಿಯು ಸದ್ದಿಲ್ಲದೆ ಈ ಮಾದರಿಯನ್ನು ಹಿಂಪಡೆದಿದೆ.
ಕಳೆದ ಮೂರು ತಿಂಗಳುಗಳಿಂದ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಶೋರೂಂಗಳಿಂದಲೂ ಮಾವ್ರಿಕ್ 440 ಕಣ್ಮರೆಯಾಗಿದೆ. ಇದು, ಪ್ರೀಮಿಯಂ ವಿಭಾಗದಲ್ಲಿ ತನ್ನದೇ ಆದ ಛಾಪು ಮೂಡಿಸಲು ಹೀರೋ ನಡೆಸಿದ ಪ್ರಯತ್ನಕ್ಕೆ ಹಿನ್ನಡೆಯಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ವಿಶೇಷವೆಂದರೆ, ಇದೇ ಬೈಕ್ನ ಫ್ಲ್ಯಾಟ್ಫಾರ್ಮ್ನಲ್ಲಿ ನಿರ್ಮಾಣವಾದ ‘ಹಾರ್ಲೆ-ಡೇವಿಡ್ಸನ್ X440’ ಯಶಸ್ವಿಯಾಗಿರುವಾಗ, ಮಾವ್ರಿಕ್ ಅದೇ ಮ್ಯಾಜಿಕ್ ಸೃಷ್ಟಿಸುವಲ್ಲಿ ವಿಫಲವಾಗಿದೆ.

ಮಾರಾಟ ಕುಸಿತವೇ ಮುಳುವಾಯಿತು
ಮಾವ್ರಿಕ್ 440ರ ವೈಫಲ್ಯಕ್ಕೆ ಅದರ ಮಾರಾಟದ ಅಂಕಿಅಂಶಗಳೇ ಸ್ಪಷ್ಟ ನಿದರ್ಶನ. ಬಿಡುಗಡೆಯಾದಾಗಿನಿಂದ ಈ ಬೈಕ್ ಒಮ್ಮೆಯೂ ಮಾಸಿಕ ನಾಲ್ಕು-ಅಂಕಿಯ ಮಾರಾಟವನ್ನು ದಾಟಲಿಲ್ಲ. ಜನವರಿ 2025ರ ವೇಳೆಗೆ, ಅದರ ಮಾಸಿಕ ಮಾರಾಟವು 50 ಯೂನಿಟ್ಗಿಂತ ಕಡಿಮೆಗೆ ಇಳಿದಿತ್ತು. ಏಪ್ರಿಲ್ ನಂತರ, ಶೋರೂಂಗಳಿಗೆ ಬೈಕ್ ರವಾನಿಸುವುದನ್ನೇ ಸಂಪೂರ್ಣವಾಗಿ ನಿಲ್ಲಿಸಲಾಯಿತು.
ಇದಕ್ಕೆ ವ್ಯತಿರಿಕ್ತವಾಗಿ, ಇದೇ ಪ್ಲಾಟ್ಫಾರ್ಮ್ನಲ್ಲಿ , ಇದೇ ಕಾರ್ಖಾನೆಯಲ್ಲಿ ತಯಾರಾದ ಹಾರ್ಲೆ-ಡೇವಿಡ್ಸನ್ X440 ಉತ್ತಮ ಪ್ರದರ್ಶನ ನೀಡಿದೆ. 2025ರ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ, ಹೀರೋ ಸಂಸ್ಥೆಯು 8,974 ಯುನಿಟ್ ಹಾರ್ಲೆ X440 ಬೈಕ್ಗಳನ್ನು ಮಾರಾಟ ಮಾಡಿದರೆ, ಇದೇ ಅವಧಿಯಲ್ಲಿ ಕೇವಲ 3,214 ಯುನಿಟ್ ಮಾವ್ರಿಕ್ ಬೈಕ್ಗಳು ಮಾತ್ರ ಮಾರಾಟವಾಗಿದ್ದವು. 2.40 ಲಕ್ಷ ಬೆಲೆಯ X440ಗಿಂತ ಮಾವ್ರಿಕ್ ಸುಮಾರು 40,000 ಅಗ್ಗವಾಗಿದ್ದರೂ ಈ ದೊಡ್ಡ ಅಂತರವು ಗ್ರಾಹಕರ ಮನಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಬೈಕ್ಗಳನ್ನು ಮಾರಾಟ ಮಾಡುವುದನ್ನೇ ಮೂಲ ಮಂತ್ರವಾಗಿಸಿಕೊಂಡಿರುವ ಹೀರೋಗೆ, ಇಷ್ಟು ಕಡಿಮೆ ಸಂಖ್ಯೆಗಳು ಉತ್ಪಾದನೆಯನ್ನು ಮುಂದುವರಿಸಲು ಸಮರ್ಥನೀಯವಾಗಿರಲಿಲ್ಲ. ಡೀಲರ್ಗಳು ಕೂಡ, ಹೆಚ್ಚು ಲಾಭಾಂಶ ಮತ್ತು ಬಲವಾದ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದ ಹಾರ್ಲೆ ಬೈಕ್ನತ್ತ ಹೆಚ್ಚು ಗಮನ ಹರಿಸಿದ್ದರಿಂದ, ಮಾವ್ರಿಕ್ ಶೋರೂಂಗಳಲ್ಲಿ ಮೂಲೆಗುಂಪಾಯಿತು.

ಇಂಜಿನಿಯರಿಂಗ್ನಲ್ಲಿ ವದೋಷವಿರಲಿಲ್ಲ
ತಾಂತ್ರಿಕವಾಗಿ ಮಾವ್ರಿಕ್ 440 ಯಾವುದೇ ಕೊರತೆಯನ್ನು ಹೊಂದಿರಲಿಲ್ಲ. 440cc ಏರ್-ಆಯಿಲ್ ಕೂಲ್ಡ್ ಎಂಜಿನ್, 27.36 PS ಪವರ್ ಮತ್ತು 36 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ, 6-ಸ್ಪೀಡ್ ಗೇರ್ಬಾಕ್ಸ್ , ಸ್ಲಿಪ್-ಅಂಡ್-ಅಸಿಸ್ಟ್ ಕ್ಲಚ್, ಎಲ್ಇಡಿ ಲೈಟಿಂಗ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಮತ್ತು ಡಿಜಿಟಲ್ ಕ್ಲಸ್ಟರ್ನಂತಹ ಆಧುನಿಕ ಸೌಲಭ್ಯಗಳನ್ನು ಇದು ಹೊಂದಿತ್ತು. ನಗರ ಮತ್ತು ಹೆದ್ದಾರಿ ಎರಡಕ್ಕೂ ಸರಿಹೊಂದುವ ಆರಾಮದಾಯಕ ವಿನ್ಯಾಸವನ್ನು ಇದು ಹೊಂದಿತ್ತು. ಕಾಗದದ ಮೇಲೆ, 400cc ವಿಭಾಗದಲ್ಲಿ ಇದು ಒಂದು ಬಲಿಷ್ಠ ಸ್ಪರ್ಧಿಯಾಗಿತ್ತು.
ಈ ಯಾವುದೇ ಉತ್ತಮ ಅಂಶಗಳು ಅದನ್ನು ಗ್ರಾಹಕರಿಗೆ ‘ಆಕರ್ಷಕ’ ಬೈಕ್ ಆಗಿ ಪರಿವರ್ತಿಸಲಿಲ್ಲ. ಮಾವ್ರಿಕ್ನ ವಿನ್ಯಾಸವು ರೋಮಾಂಚನಕಾರಿಯಾಗಿರದೆ, ಕೇವಲ ಕ್ರಿಯಾತ್ಮಕವಾಗಿತ್ತು (functional). ಸುಮಾರು 2 ಲಕ್ಷ ಖರ್ಚು ಮಾಡುವ ಗ್ರಾಹಕರು, ಅದರಲ್ಲೂ ಸ್ಟೈಲ್ ಮತ್ತು ಬ್ರ್ಯಾಂಡ್ ಮೌಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಈ ವಿಭಾಗದಲ್ಲಿ, ಮಾವ್ರಿಕ್ ಒಂದು ‘ಆಕಾಂಕ್ಷೆಯ ಬೈಕ್’ ಆಗಿ ಕಾಣಿಸಿಕೊಳ್ಳಲಿಲ್ಲ. ಹೀರೋ ಸಂಸ್ಥೆಯ ಅತ್ಯುತ್ತಮ ಉತ್ಪನ್ನಗಳಲ್ಲಿ ಒಂದಾಗಿದ್ದರೂ, ಮಾವ್ರಿಕ್ ತನ್ನ ಮೇಲಿದ್ದ ‘ಕಮ್ಯೂಟರ್ ಬೈಕ್ ಬ್ರ್ಯಾಂಡ್’ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳಲು ವಿಫಲವಾಯಿತು ಎಂದು ಉದ್ಯಮ ತಜ್ಞರು ವಿಶ್ಲೇಷಿಸುತ್ತಾರೆ.

ಹೀರೋ ಮುಂದಿನ ದಾರಿ ಏನು?
ಮಾವ್ರಿಕ್ 440ರ ವೈಫಲ್ಯವು ಪ್ರೀಮಿಯಂ ವಿಭಾಗದಲ್ಲಿ ಹೀರೋ ಸಂಸ್ಥೆಯು ಎದುರಿಸುತ್ತಿರುವ ದೊಡ್ಡ ಹೋರಾಟದ ಒಂದು ಭಾಗವಾಗಿದೆ. 2024ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಯಲ್ಲಿ 350-500cc ಮೋಟಾಸೈಕಲ್ಗಳ ಮಾರುಕಟ್ಟೆಯು ಶೇ. 36ರಷ್ಟು ಬೆಳವಣಿಗೆ ಕಂಡರೂ, X440 ಮತ್ತು ಮಾವ್ರಿಕ್ ಎರಡನ್ನೂ ಸೇರಿ ಹೀರೋ ಗಳಿಸಿದ್ದು ಕೇವಲ ಶೇ. 13ರಷ್ಟು ಪಾಲು ಮಾತ್ರ.
ಕಂಪನಿಯ ಒಟ್ಟಾರೆ ಮಾರುಕಟ್ಟೆ ಪಾಲು ಕೂಡ ಕುಸಿಯುತ್ತಿದೆ. 2023ರಲ್ಲಿ 31.3% ಇದ್ದ ಪಾಲು, 2024ರಲ್ಲಿ 29%ಕ್ಕೆ ಮತ್ತು ಜನವರಿ 2025ರ ವೇಳೆಗೆ 26.9%ಕ್ಕೆ ಇಳಿದಿದೆ, ಇದು ದಶಕದಲ್ಲೇ ಅತ್ಯಂತ ಕಡಿಮೆ. ಇಂದಿಗೂ ಕಂಪನಿಯು ‘ಸ್ಪ್ಲೆಂಡರ್’ನಂತಹ ಹಳೆಯ ಮಾದರಿಗಳ ಮೇಲೆ ಶೇ. 60ಕ್ಕಿಂತ ಹೆಚ್ಚು ಅವಲಂಬಿತವಾಗಿರುವುದೇ ಇದಕ್ಕೆ ಪ್ರಮುಖ ಕಾರಣ.