ಬೆಂಗಳೂರು: ಪೋಸ್ಟ್ ಆಫೀಸ್ ಈಗ ಯಾವುದೇ ಪತ್ರಗಳನ್ನು ಕಳುಹಿಸುವುದು, ಸ್ಪೀಡ್ ಪೋಸ್ಟ್ ಮಾಡುವುದು, ಮನಿ ಆರ್ಡರ್ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಪೋಸ್ಟ್ ಆಫೀಸ್ ಗಳು ಈಗ ಬ್ಯಾಂಕ್ ಗಳಾಗಿಯೂ ಬದಲಾಗಿವೆ. ಅದರಲ್ಲೂ, ಹೂಡಿಕೆಯ ತಾಣಗಳಾಗಿವೆ ಬದಲಾಗಿವೆ. ಇನ್ನು, ಹೂಡಿಕೆಗೆ ಗ್ಯಾರಂಟಿ ಇರಬೇಕು, ಆದ್ರೆ, ಎಫ್ ಡಿಗಿಂತ ಹೆಚ್ಚಿನ ಬಡ್ಡಿ ಬೇಕು ಅನ್ನೋರಿಗೆ, ಪೋಸ್ಟ್ ಆಫೀಸಿನ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯು (ಎನ್ ಎಸ್ ಸಿ) ಹೇಳಿ ಮಾಡಿಸಿದಂತಿದೆ. ಈ ಯೋಜನೆಯ ವಿವರ ಇಂತಿದೆ ನೋಡಿ.
ಪೋಸ್ಟ್ ಆಫೀಸಿನ ಎನ್ ಎಸ್ ಸಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ವರ್ಷಕ್ಕೆ ಶೇ. 7.7 ರಷ್ಟು ಬಡ್ಡಿ ಸಿಗುತ್ತಿದೆ. ಇದು ಹಲವು ಬ್ಯಾಂಕ್ಗಳ ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರಕ್ಕಿಂತ ಹೆಚ್ಚಾಗಿದೆ. ಈ ಬಡ್ಡಿದರವನ್ನು ಪ್ರತಿ ವರ್ಷ ನಿಮ್ಮ ಅಸಲಿಗೆ ಸೇರಿಸಿ, ಅದರ ಮೇಲೂ ಬಡ್ಡಿ ಲೆಕ್ಕ ಹಾಕಲಾಗುತ್ತದೆ. ಇದರಿಂದಾಗಿ ಚಕ್ರ ಬಡ್ಡಿಯ ಲಾಭವನ್ನು ಪಡೆಯಬಹುದಾಗಿದೆ.
ಎನ್ ಎಸ್ ಸಿ ಯೋಜನೆಯಲ್ಲಿ 10,000 ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷಗಳ ನಂತರ ನಿಮ್ಮ ಕೈಗೆ ಬರೋಬ್ಬರಿ 14,490 ರೂಪಾಯಿ ಸಿಗುತ್ತದೆ. ಅಂದರೆ, ನಿಮ್ಮ ಹೂಡಿಕೆಯ ಮೇಲೆ 4,490 ರೂಪಾಯಿ ಲಾಭ ಸಿಗುತ್ತಿದೆ. ಇದೇ ರೀತಿ, ನೀವು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 5 ವರ್ಷದ ನಂತರ ನಿಮಗೆ 1,44,900 ರೂಪಾಯಿ ಸಿಗುತ್ತದೆ. 44,900 ರೂಪಾಯಿ ಲಾಭವೇ ಸಿಗುತ್ತದೆ.
ಎನ್ ಎಸ್ ಸಿ ಯೋಜನೆಯು 5 ವರ್ಷಗಳ ಲಾಕ್-ಇನ್ ಪೀರಿಯಡ್ ಹೊಂದಿದೆ. ಸಾಮಾನ್ಯವಾಗಿ, 5 ವರ್ಷಗಳ ಮೊದಲು ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಇದಕ್ಕೆ ಅವಕಾಶವಿದೆ. ಹೂಡಿಕೆದಾರನ ಅಕಾಲಿಕ ಮರಣ ಕೆಲ ವಿಶೇಷ ಸಂದರ್ಭಗಳಲ್ಲಿ ಮಾತ್ರ ವಾಪಸ್ ಪಡೆಯಲು ಸಾಧ್ಯವಿದೆ. ಒಂದು ವರ್ಷದ ಮೊದಲೇ ಹೂಡಿಕೆ ಹಿಂಪಡೆದರೆ, ಯಾವುದೇ ಬಡ್ಡಿಯ ಲಾಭ ಸಿಗೋದಿಲ್ಲ.