ನಾಗ್ಪುರ: ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಭಾರತದ ವೇಗಿ ಹರ್ಷಿತ್ ರಾಣಾ ಕಳಪೆ ಹಾಗೂ ಉತ್ತಮ ದಾಖಲೆಗಳನ್ನು ಮಾಡಿದ್ದಾರೆ. . ಏಕದಿನ ಕ್ರಿಕೆಟ್ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಭಾರತದ ಪರ ಅನಗತ್ಯ ದಾಖಲೆ ಸೃಷ್ಟಿಸಿದ್ದಾರೆ.
ಹರ್ಷಿತ್ ಒಂದೇ ಓವರ್‌ನಲ್ಲಿ 26 ರನ್ ಬಿಟ್ಟುಕೊಡುವ ಮೂಲಕ ಕಳಪೆ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಆಡಿದ ಚೊಚ್ಚಲ ಏಕದಿನ ಪಂದ್ಯದಲ್ಲೇ ಬೌಲರ್ ಒಬ್ಬ ಬಿಟ್ಟುಕೊಟ್ಟ ಅತಿ ಹೆಚ್ಚು ರನ್‌ಗಳ ದಾಖಲೆ. ಬಲಗೈ ವೇಗಿ ಎಸೆದ ಆರನೇ ಓವರ್ನಲ್ಲಿ 26 ರನ್ ದಂಡಿಸಿಕೊಂಡಿದ್ದಾರೆ.. ಈ ಓವರ್ನಲ್ಲಿ ಸಾಲ್ಟ್, 3 ಸಿಕ್ಸರ್, 2 ಬೌಂಡರಿ ಬಾರಿಸಿದ್ದರು.
ಏಕದಿನ ಪಂದ್ಯದ ಓವರ್ವೊಂದರಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ಭಾರತೀಯ ಬೌಲರ್ಗಳ ಪಟ್ಟಿಯಲ್ಲೂ ಹರ್ಷಿತ್ ಸ್ಥಾನ ಪಡೆದಿದ್ದಾರೆ. ಈ ಲಿಸ್ಟ್ನಲ್ಲಿ ನಾಲ್ವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ. ಇಶಾಂತ್ ಶರ್ಮಾ, ಯುವರಾಜ್ ಸಿಂಗ್, ಕೃನಾಲ್ ಪಾಂಡ್ಯ ಮೊದಲ ಮೂರು ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ದಿನೇಶ್ ಮೋಂಗಿಯಾ, ಆರ್ಪಿ ಸಿಂಗ್, ವಿಆರ್ವಿ ಸಿಂಗ್ ಕೂಡ ಅತಿ ಹೆಚ್ಚು ರನ್ ಬಿಟ್ಟುಕೊಟ್ಟ ದಾಖಲೆ ಹೊಂದಿದ್ದಾರೆ.
ಉತ್ತಮ ದಾಖಲೆ
ಕೆಟ್ಟ ದಾಖಲೆಯ ಜೊತೆಗೆ ಅತ್ಯುತ್ತಮ ದಾಖಲೆಯೊಂದನ್ನೂ ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾರೆ ಹರ್ಷಿತ್ ರಾಣಾ. ಪಂದ್ಯದಲ್ಲಿ 7 ಓವರ್ ಬೌಲಿಂಗ್ ಮಾಡಿದ ಹರ್ಷಿತ್ ಒಂದು ಮೇಡನ್ ಸಮೇತ 53 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಿತ್ತರು. ಇದರೊಂದಿಗೆ ಹರ್ಷಿತ್ ರಾಣಾ ಮೂರು ಸ್ವರೂಪಗಳಲ್ಲೂ ತಮ್ಮ ಚೊಚ್ಚಲ ಪಂದ್ಯದಲ್ಲಿ 3+ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.