ಬೆಂಗಳೂರು: ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿ. 9ರಿಂದ ನಡೆಯಲಿದೆ. ಹೀಗಾಗಿ ಇದಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಿತು. ಈ ವೇಳೆ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು.
ಮುಖವಾಗಿ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ಸೂಚಿಸಿದ್ದು, ರಾಜ್ಯಪಾಲರ ಅಧಿಕಾರ ಹಿಂಪಡೆಯಲಾಗಿದೆ. ಹೀಗಾಗಿ ಇದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಬಹುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿವಿ ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆ ಅನುಮೋದಿಸಿದೆ. ಇಷ್ಟು ದಿನ ರಾಜ್ಯಪಾಲರು ಚಾನ್ಸಲರ್ ಆಗಿದ್ದರು. ಆದರೆ, ಇನ್ನು ಮುಂದೆ ಮುಖ್ಯಮಂತ್ರಿ ಚಾನ್ಸಲರ್ ಆಗಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ತಿದ್ದುಪಡಿ ವಿಧೇಯಕಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಚಾಣಕ್ಯ ವಿವಿ ತಿದ್ದುಪಡಿ ವಿಧೇಯಕಕ್ಕೆ ಕ್ಯಾಬಿನೆಟ್ ಅನುಮೋದಿಸಿದ್ದು, ಸರ್ಕಾರಿ ಅಧಿಕಾರಿ ಉಸ್ತುವಾರಿ ನೇಮಕಕ್ಕೆ ವಿಧೇಯಕದಲ್ಲಿ ಅವಕಾಶ ನೀಡಲಾಗಿದೆ. ಅಲ್ಲಲದೇ, ಕೆಲವು ವಿಧೇಯಕಗಳಿಗೆ ಅನುಮೋದಿಸಲಾಗಿದೆ ಎಂದಿದ್ದಾರೆ.
ಕರ್ನಾಟಕ ಕಾರ್ಮಿಕರ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕ-2024, ಕಲ್ಯಾಣ ನಿಧಿ ಸಂಗ್ರಹದ ಮೊತ್ತ ಏರಿಸಲು ವಿಧೇಯಕದಲ್ಲಿ ತಿದ್ದುಪಡಿ ಮಾಡಲಾಗಿದೆ. ಕಾರ್ಮಿಕರಿಂದ 20, ಮಾಲೀಕರಿಂದ 40, ಸರ್ಕಾರದಿಂದ 20 ರೂ. ಬದಲು, 50-100-50 ರೂಪಾಯಿಗಳ ಸಂಗ್ರಹಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.