ಹಾಸನ: ಹಾಸನ ಜಿಲ್ಲೆಯ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ 50 ಲಕ್ಷ ರೂ. ಗಳನ್ನು ಪರಿಹಾರ ನೀಡಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದ್ದಾರೆ.
5 ಲಕ್ಷಕ್ಕಿಂತ ಹೆಚ್ಚು ಪರಿಹಾರ ಕೊಡುವುದಿಲ್ಲ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಛಲವಾದಿ, 5ಲಕ್ಷಕಿಂತ ಹೆಚ್ಚು ಪರಿಹಾರ ಕೊಡಲು ಸರ್ಕಾರದಲ್ಲಿ ದುಡ್ಡಿಲ್ಲ.ಯಾರು ಎಲ್ಲೇ ಸತ್ತು ಹೋಗಲಿ 5 ಲಕ್ಷ ರೂ. ಬಿಸಾಕಿ ಕರ್ಮ ಕಳೆದುಕೊಳ್ಳುತ್ತೇವೆ ಎಂಬ ಲೆಕ್ಕದಲ್ಲಿ ಸರ್ಕಾರವಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಗಣೇಶೋತ್ಸವ ಮಾಡಲು ಸರ್ಕಾರ ಅಡ್ಡಿ ಮಾಡುತ್ತಿದೆ. ಸರ್ಕಾರಕ್ಕೆ ಅಲ್ಪಸಂಖ್ಯಾತರನ್ನು ಕಂಡರೆ ಭಯ ಹೆಚ್ಚಾಗಿದ್ದು, ಅದಕ್ಕೆ ರಣಹೇಡಿತನವನ್ನು ಪ್ರದರ್ಶನ ಮಾಡುತ್ತಿದೆ. ಬಹುಶಃ ಅವರನ್ನು ನಿಯಂತ್ರಣ ಮಾಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎನ್ನಿಸುತ್ತಿದೆ. ಹಾಗಾಗಿ, ಕ್ರಿಮಿನಲ್ ಪ್ರಕರಣವನ್ನು ವಾಪಸ್ ಪಡೆದು ಅವರಿಗೆ ಶಾಂತಿದೂತರ ಪಟ್ಟ ಕೊಟ್ಟ ಕೂಡಲೇ ರಾಜ್ಯದಲ್ಲಿ ಇಂತಹ ಘಟನೆಗಳು ಆರಂಭವಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನ ಇರುವುದು ಯಾರನ್ನೋ ಓಲೈಕೆ ಮಾಡುವುದಕ್ಕಲ್ಲ, ಇದು ಹಿಂದೂ ವಿರೋಧಿ, ಅಲ್ಪಸಂಖ್ಯಾತರ ವಿರೋಧಿ ಸರ್ಕಾರ. ಗಣೇಶ ಉತ್ಸವಕ್ಕೆ ಎಲ್ಲೂ ಅವಕಾಶ ಕೊಡಬೇಡಿ ಎಂದು ಎಲ್ಲಾ ಜಿಲ್ಲೆಗಳಿಗೆ ಸರ್ಕಾರದಿಂದ ಮಾಹಿತಿ ಹೋಗಿದೆ, ಅಧಿಕೃತ ಆದೇಶ ಹೊರಡಿಸಿಲ್ಲ ಅಷ್ಟೇ
ಶಿವಾಜಿನಗರದ ಹೆಸರನ್ನು ಬದಲಿಸಲು ಸರ್ಕಾರ ಹೊರಟಿದೆ. ಸರ್ಕಾರದ ಪ್ರಕಾರ ಶಿವಾಜಿ ಕರ್ನಾಟಕದವರು ಅಲ್ಲ. ಸೇಂಟ್ ಮೇರಿ ಎಲ್ಲಿಯವರು? ಶಿವಾಜಿನಗರದವರಾ? ಕರ್ನಾಟಕದವರಾ? 400 ಕೋಟಿ ರೂ. ವೆಚ್ಚದಲ್ಲಿ ಮುಸ್ಲಿಂ ಕಾಲೋನಿಗಳನ್ನು ಸುಭದ್ರಗೊಳಿಸುವ ನಿರ್ಧಾರ ಮಾಡಿದೆ ಆದರೆ ಸರ್ಕಾರಕ್ಕೆ ಕೊಳಚೆ ಪ್ರದೇಶಗಳಲ್ಲಿನ ದಲಿತರ ಪರ ಕಾಳಜಿ ಇಲ್ಲ ಅಲ್ಪಸಂಖ್ಯಾತರಿಗೆ ಬಹುಮಾನ, ದಲಿತರಿಗೆ ಅವಮಾನ, ಇದು ಸರ್ಕಾರದ ನೀತಿ ಎಂದು ಗುಡುಗಿದ್ದಾರೆ.
ಜಾತಿ ಗಣತಿಯಲ್ಲಿ ಒಕ್ಕಲಿಗ ಕ್ರೈಸ್ತ, ಲಿಂಗಾಯತ ಕ್ರೈಸ್ತ ಎಂದು ಸೋನಿಯಾ ಗಾಂಧಿಯವರನ್ನು ಓಲೈಸಲು ಜಾತಿ ಜಾತಿಗೂ ಕ್ರೈಸ್ತರನ್ನು ಸೇರಿಸುತ್ತಿದೆ. ಮತಾಂತರವನ್ನೂ ಉತ್ತೇಜಿಸುವ ಕೆಲಸ ಸರ್ಕಾರ ಮಾಡುತ್ತಿದ್ದಾರೆ. ಜಾತಿ ಗಣತಿಯಲ್ಲಿ ಆಸ್ತಿಕ, ನಾಸ್ತಿಕ ಎಂಬ ಕಾಲಂ ಯಾಕೆ? ಸಿದ್ದರಾಮಯ್ಯ ಅವರದ್ದು ನಡೆ ಒಂದು, ನುಡಿ ಒಂದು ಸಿದ್ದರಾಮಯ್ಯನವರಿಗೆ ಏನಾಗಿದೆಯೋ ಗೊತ್ತಿಲ್ಲ. ಅವರ ವಯಸ್ಸಿನ ಕಾರಣವೋ ಏನೋ, ಅಧಿಕಾರದಲ್ಲಿ ಕುಳಿತುಕೊಳ್ಳಲು ಸಿದ್ದರಾಮಯ್ಯ ಇಂತಹ ಅವಿವೇಕತನದ ಕೆಲಸ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.



















