ಫರಿದಾಬಾದ್ : 17 ವರ್ಷದ ಬಾಲಕಿಯೊಬ್ಬಳ ಮೇಲೆ ಆಕೆಯ ಮನೆ ಹತ್ತಿರವೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಬಲ್ಲಭಗಢ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಮ್ ಕಾಲೋನಿಯಲ್ಲಿ ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆಯ ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬಾಲಕಿಯನ್ನು ಶ್ಯಾಮ್ ಕಾಲೋನಿಯ ನಿವಾಸಿ ಕನಿಷ್ಕಾ ಎಂದು ಗುರುತಿಸಲಾಗಿದ್ದು, ಗುಂಡು ಆಕೆಯ ಭುಜಕ್ಕೆ ತಗುಲಿ ಗಂಭೀರ ಸ್ಥಿತಿಯಲ್ಲಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಮನೆಯ ಬಳಿಯೇ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂದು ಗುಂಡು ಆಕೆಯ ಭುಜಕ್ಕೆ ತಗುಲಿದರೆ, ಇನ್ನೊಂದು ಗುಂಡು ಆಕೆಯ ಹೊಟ್ಟೆಗೆ ತಗುಲಿದೆ. ಇನ್ನು ಕೃತ್ಯದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆಯ ವಿಡಿಯೋದಲ್ಲಿ, ಆರೋಪಿಯು ಕೈಯಲ್ಲಿ ಪಿಸ್ತೂಲ್ ಹಿಡಿದು ಬಾಲಕಿಯ ಕಡೆಗೆ ಧಾವಿಸುತ್ತಿರುವುದು ಸೆರೆಯಾಗಿದೆ. ಆ ಬಾಲಕಿ ಇತರ ಹುಡುಗಿಯರೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆತ ಆ ಹುಡುಗಿಯ ಮೇಲೆ ಗುಂಡು ಹಾರಿಸಿದ್ದಾನೆ. ಸದ್ಯ ಅಪರಾಧಕ್ಕೆ ಬಳಸಲಾದ ಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ಸಂತ್ರಸ್ತೆಗೆ ಪರಿಚಿತನೆಂದು ತಿಳಿದುಬಂದಿದೆ. ತಾನು ಓದುತ್ತಿದ್ದ ಟ್ಯೂಷನ್ ಕೇಂದ್ರದಲ್ಲೇ ಓದುತ್ತಿದ್ದ ಆರೋಪಿಯನ್ನು ಬಾಲಕಿ ಗುರುತಿಸಿದ್ದಾಳೆ ಎಂದು ಫರಿದಾಬಾದ್ ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಮತ್ತು ಅಪರಾಧ ವಿಭಾಗವು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.
ಇದನ್ನೂ ಓದಿ : ಕೊಲೆಯಾದವನ ಬರ್ತ್ಡೇ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ!



















