ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಟಿ20 ಪಂದ್ಯಗಳ ಟೂರ್ನಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಭಾರತ ತಂಡ ಗೆದ್ದು ಬೀಗಿದೆ. ಈ ಮೂಲಕ ತಂಡದ ನೂತನ ಕೋಚ್ ಗೌತಮ್ ಗಂಭೀರ್ ಹಾಗೂ ನೂತನ ನಾಯಕ ಸೂರ್ಯಕುಮಾರ್ ಯಾದವ್ ಗೆಲುವಿನ ಮೂಲಕ ತಮ್ಮ ಅಭಿಯಾನ ಆರಂಭಿಸಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ ನಂತರ ಸೂರ್ಯಕುಮಾರ್ ನಾಯಕತ್ವದಲ್ಲಿ ಭಾರತ ತಂಡ ಇದೇ ಮೊದಲ ಟೂರ್ನಿಯಲ್ಲಿ ಆಡಿದೆ. ಗೌತಮ್ ಗಂಭೀರ್ ಟೀಂ ಇಂಡಿಯಾ ಕೋಚ್ ಆಗಿಯೂ ಇದು ಮೊದಲ ಸರಣಿ. ಹೀಗಾಗಿ ಮೊದಲ ಪ್ರಯತ್ನದಲ್ಲೇ ಗಂಭೀರ್ ಹಾಗೂ ಸೂರ್ಯಕುಮಾರ್ ಯಾದವ್ ಗೆಲುವಿನ ಸಿಹಿ ಉಂಡಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯಕ್ಕೆ ಮಳೆಯ ಕಾಟ ಶುರುವಾಗಿತ್ತು. ಹೀಗಾಗಿ ಡಕ್ ವರ್ತ್ ನಿಯಮದಂತೆ ಭಾರತಕ್ಕೆ 78 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಭಾರತ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 161 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಭಾರತ ತಂಡದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಕಣಕ್ಕೆ ಇಳಿದಿದ್ದರು. ಮೊದಲ ಓವರ್ ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಮಳೆ ಆರಂಭವಾಯಿತು. ಹೀಗಾಗಿ ಪಂದ್ಯವನ್ನು ಕೆಲ ಕಾಲ ನಿಲ್ಲಿಸಲಾಯಿತು. ನಂತರ ಭಾರತಕ್ಕೆ ಡಕ್ ವರ್ತ್ ನಿಯಮದಂತೆ 8 ಓವರ್ ಗಳಲ್ಲಿ 78 ರನ್ ಗಳ ಟಾರ್ಗೆಟ್ ನೀಡಲಾಯಿತು.
ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸಂಜು ಸ್ಯಾಮ್ಸನ್ ಮೊದಲ ಬೌಲಿಂಗ್ ನಲ್ಲಿಯೇ ಔಟ್ ಆಗುವ ಮೂಲಕ ಶಾಕ್ ನೀಡಿದರು. ನಂತರ ಯಶಸ್ವಿ ಜೈಸ್ವಾಲ್ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಜೊತೆಯಾಟ ಗೆಲುವಿನ ಹಾದಿ ಸುಗಮಗೊಳಿಸಿತು. ಜೈಸ್ವಾಲ್ 15 ಎಸೆತದಲ್ಲಿ 30 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 12 ಎಸೆತದಲ್ಲಿ 26 ರನ್ ಸಿಡಿಸಿ ಔಟಾದರು. ಹಾರ್ದಿಕ್ ಪಾಂಡ್ಯ 9 ಎಸೆತದಲ್ಲಿ ಅಜೇಯ 22 ರನ್ ಸಿಡಿಸಿದರು. ರಿಷಬ್ ಪಂತ್ ಅಜೇಯ 2 ರನ್ ಗಳಿಸಿದರು. ಈ ಮೂಲಕ ಭಾರತ ತಂಡ 7 ವಿಕೆಟ್ ಗಳ ಜಯ ದಾಖಲಿಸಿತು.