ನವದೆಹಲಿ : ಕಳೆದ 13 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ಬದುಕುತ್ತಿದ್ದ 32 ವರ್ಷ ವಯಸ್ಸಿನ ಹರೀಶ್ ರಾಣಾ ಇಂದು ನಿಧನರಾಗಿದ್ದಾರೆ. ಇವರಿಗೆ ಮಾರ್ಚ್ ಇತ್ತೀಚಿಗೆ ಸುಪ್ರೀಂ ಕೋರ್ಟ್ ಭಾರತದ ಮೊದಲ ಕಾನೂನುಬದ್ಧ ನಿಷ್ಕ್ರಿಯ ದಯಾಮರಣಕ್ಕೆ ಅನುಮತಿ ನೀಡಿತ್ತು.
ಹರೀಶ್ ರಾಣಾಗೆ ನಿಷ್ಕ್ರಿಯ ದಯಾಮರಣವನ್ನು ಅನುಮತಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಏಮ್ಸ್ ದಯಾಮರಣ ಪ್ರಕ್ರಿಯೆ ಆರಂಭಿಸಿತ್ತು. ಮಾರ್ಚ್ 14 ರಂದು ಆಸ್ಪತ್ರೆಗೆ ದಾಖಲಾದ ನಂತರ, ಮಾರ್ಚ್ 16ರಂದು ಹರೀಶ್ ರಾಣಾ ದಯಾಮರಣ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು.
ಪ್ರಕ್ರಿಯೆಯ ಮೊದಲ ಹಂತದಲ್ಲಿ ಟ್ಯೂಬ್ ಮೂಲಕ ಅವರಿಗೆ ಆಹಾರ ಪೂರೈಕೆಯನ್ನು ನಿಲ್ಲಿಸಲಾಯಿತು. ನಂತರ ಎರಡನೇ ಹಂತದಲ್ಲಿ ನೀರನ್ನು ನಿಲ್ಲಿಸಲಾಯಿತು. ಅಂದಿನಿಂದ, ವೈದ್ಯರು ಅವರ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದರು.
ಪ್ರಕರಣದ ಹಿನ್ನೆಲೆ
2013ರಲ್ಲಿ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಬಿದ್ದು ತಲೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದ ಹರೀಶ್ ರಾಣಾ ಅವರು ಅಂದಿನಿಂದ ಕೋಮಾದಲ್ಲಿದ್ದರು. ಮಗನನ್ನು ಅಂದಿನಿಂದಲೂ ಪೋಷಕರು ನೋಡಿಕೊಂಡಿದ್ದರು. ಆದರೆ, ಯಾವುದೇ ಚೇತರಿಕೆ ಇಲ್ಲದ ಕಾರಣ, ಆತನಿಗೆ ದಯಾಮರಣ ನೀಡಬೇಕು ಎಂದು ಕೋರಿ ಪೋಷಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದಕ್ಕೆ ಸುಪ್ರೀಂ ಕೂಡಾ ಅನುಮತಿ ನೀಡಿತ್ತು. ಪ್ರೊಫೆಸರ್ ಮತ್ತು ಅರಿವಳಿಕೆ ವಿಭಾಗದ ಮುಖ್ಯಸ್ಥರಾದ ಡಾ.ಸೀಮಾ ಮಿಶ್ರಾ ನೇತೃತ್ವದ ವಿಶೇಷ ವೈದ್ಯಕೀಯ ತಂಡವನ್ನು ದಯಾಮರಣ ಪ್ರಕ್ರಿಯೆ ಕಾರ್ಯಗತಗೊಳಿಸಲು ರಚಿಸಲಾಗಿತ್ತು.
ಇದನ್ನೂ ಓದಿ : ಕೈಯಲ್ಲಿ ದುಡ್ಡೇ ಉಳಿಯಲ್ಲ, ಇಎಂಐ ಹೊರೆಯಾಗುತ್ತಿದೆಯೇ? ತಜ್ಞರ ಪರಿಹಾರ ಇಲ್ಲಿದೆ



















