ರಾಯಚೂರು: ಮಟನ್ ತಿಂದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಸಿರವಾರ (Sirwar) ತಾಲೂಕಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ಭೀಮಣ್ಣ (60), ಪತ್ನಿ ಈರಮ್ಮ (54), ಮಗ ಮಲ್ಲೇಶ್ (19), ಪುತ್ರಿ ಪಾರ್ವತಿ (17) ಸಾವನ್ನಪ್ಪಿದ ದುರ್ದೈವಿಗಳು. ಅಲ್ಲದೇ, ಘಟನೆಯಲ್ಲಿ ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಭೀಮಣ್ಣ ಮತ್ತು ಈರಮ್ಮ ಅವರ ಮತ್ತೊಬ್ಬ ಪುತ್ರಿ ಮಲ್ಲಮ್ಮ (18) ಎಂಬವರ ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ (Raichur) ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಟನ್ ಮಾಡುವ ಸಂದರ್ಭದಲ್ಲಿ ಅಡುಗೆಯಲ್ಲಿ ಹಲ್ಲಿ ಬಿದ್ದಿದ್ದರಿಂದಾಗಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.