ದುಬೈ : ಸತತ 15 ವರ್ಷಗಳಿಂದ ಪ್ರತಿ ತಿಂಗಳೂ ಲಾಟರಿ ಟಿಕೆಟ್ ಖರೀದಿಸುತ್ತಿದ್ದ ಶಾರ್ಜಾದಲ್ಲಿರುವ ಭಾರತೀಯ ಮೂಲದ ಪಿಕ್-ಅಪ್ ಚಾಲಕರೊಬ್ಬನಿಗೆ ಕೊನೆಗೂ ಅದೃಷ್ಟ ಖುಲಾಯಿಸಿದೆ. ವಿಬೀಶ್ ಪಲ್ಲಿಯಾಲಿ ಎಂಬವರು ಪ್ರತಿಷ್ಠಿತ ‘ಬಿಗ್ ಟಿಕೆಟ್’ ಡ್ರಾ ಮೂಲಕ ಬರೋಬ್ಬರಿ 15 ಮಿಲಿಯನ್ ದಿರ್ಹಮ್ (ಸುಮಾರು 34 ಕೋಟಿ ರೂ.) ಜಾಕ್‌ಪಾಟ್ ಗೆದ್ದಿದ್ದಾರೆ.
ಈ ಬಹುಮಾನದ ಮೊತ್ತವನ್ನು ಅವರು ತಮ್ಮ ಮೂವರು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿದ್ದು, ವಿಬೀಶ್ ಅವರ ಪಾಲಿಗೆ ಸುಮಾರು 4 ಮಿಲಿಯನ್ ದಿರ್ಹಮ್, ಅಂದರೆ ಬರೋಬ್ಬರಿ 10 ಕೋಟಿ ರೂ. ಒಲಿಯಲಿವೆ.
ಸ್ನೇಹಿತರ ಒತ್ತಾಯಕ್ಕೆ ಖರೀದಿಸಿದ ಟಿಕೆಟ್
ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಫೆ.7ರಂದು ಭಾರತಕ್ಕೆ ಪ್ರಯಾಣಿಸುತ್ತಿದ್ದಾಗ ವಿಬೀಶ್ 1,000 ದಿರ್ಹಮ್ ಕೊಟ್ಟು ಒಂದು ಸೆಟ್ ಟಿಕೆಟ್ ಖರೀದಿಸಿದ್ದರು. ಆದರೆ, ಫೆ.28ರಂದು ಅವರ ಸಂಬಂಧಿ ಹಾಗೂ ಇಬ್ಬರು ಸ್ನೇಹಿತರು ಕರೆ ಮಾಡಿ, ತಮ್ಮ ಜೊತೆಗೂಡಿ ಮತ್ತೊಂದು ಟಿಕೆಟ್ ಖರೀದಿಸುವಂತೆ ದುಂಬಾಲು ಬಿದ್ದಿದ್ದರು. “ನಾನು ಈ ತಿಂಗಳ ಬಜೆಟ್ ಮುಗಿದಿದೆ ಎಂದು ಎಷ್ಟೇ ಹೇಳಿದರೂ ಅವರು ಕೇಳಲಿಲ್ಲ. ಕೊನೆಗೆ ಅವರ ಮನಸ್ಸು ನೋಯಿಸಬಾರದು ಎಂದು ಅಂದು ರಾತ್ರಿ 8 ಗಂಟೆಗೆ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಿದೆ. ಅದೇ ಟಿಕೆಟ್ ಈಗ ನನ್ನ ಪಾಲಿಗೆ ಅದೃಷ್ಟ ತಂದಿದೆ” ಎಂದು ವಿಬೀಶ್ ಸಂತಸ ಹಂಚಿಕೊಂಡಿದ್ದಾರೆ.
ಕರೆ ಬಂದಾಗ ನಂಬಲೇ ಇಲ್ಲ!
ಸಾರಿಗೆ ಕಂಪನಿಯೊಂದರಲ್ಲಿ ಕೆಲಸ ಮಾಡುವ ವಿಬೀಶ್ ಅವರು ಎಂದಿನಂತೆ ತಮ್ಮ ಪಿಕ್-ಅಪ್ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬಿಗ್ ಟಿಕೆಟ್ ಸಂಸ್ಥೆಯಿಂದ ಅಭಿನಂದನಾ ಕರೆ ಬಂದಿದೆ. ಆದರೆ, ವಿಬೀಶ್ ಇದನ್ನು ಲಾಟರಿ ಟಿಕೆಟ್ ಖರೀದಿಸುವಂತೆ ನೆನಪಿಸಲು ಬಂದ ಸಾಮಾನ್ಯ ಕರೆ ಎಂದುಕೊಂಡಿದ್ದರು. “ನಾನು ಅವರ ಕಾಯಂ ಗ್ರಾಹಕನಾಗಿರುವುದರಿಂದ ತಿಂಗಳ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಆಫರ್‌ಗಳ ಬಗ್ಗೆ ತಿಳಿಸಲು ಅವರು ಕರೆ ಮಾಡುವುದು ವಾಡಿಕೆ. ಆದರೆ, ತಿಂಗಳ ಆರಂಭದಲ್ಲಿಯೇ ಕರೆ ಮಾಡಿದ್ದೇಕೆ ಎಂದು ಅಚ್ಚರಿಗೊಂಡೆ. ಯಾರೋ ನನ್ನನ್ನು ತಮಾಷೆ ಮಾಡುತ್ತಿದ್ದಾರೆ ಎಂದೇ ಭಾವಿಸಿದ್ದೆ” ಎಂದು ವಿಬೀಶ್ ಆ ಕ್ಷಣವನ್ನು ಸ್ಮರಿಸಿದ್ದಾರೆ. ನಂತರ ನನ್ನ ಪತ್ನಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆಕೆ ತಕ್ಷಣವೇ ವೆಬ್‌ಸೈಟ್ ಪರಿಶೀಲಿಸಿ, ವಿಜೇತರ ಪಟ್ಟಿಯಲ್ಲಿ ನನ್ನ ಹೆಸರು ಇರುವುದನ್ನು ಖಚಿತಪಡಿಸಿದಳು. ಅದೊಂದು ಅದ್ಭುತ ಕ್ಷಣವಾಗಿತ್ತು ಎಂದಿದ್ದಾರೆ ವಿಬೀಶ್.
ಚಾಲಕನ ಸೀಮಿತ ಆದಾಯದಲ್ಲಿ ಪ್ರತಿ ತಿಂಗಳೂ ದುಬಾರಿ ಲಾಟರಿ ಟಿಕೆಟ್ ಖರೀದಿಸುವುದು ವಿಬೀಶ್ ಪಾಲಿಗೆ ಸುಲಭದ ಮಾತಾಗಿರಲಿಲ್ಲ. ಈ ವಿಚಾರಕ್ಕೆ ಪತ್ನಿಯಿಂದ ಸಾಕಷ್ಟು ಬಾರಿ ಬೈಸಿಕೊಂಡಿದ್ದರೂ ಅವರು ತಮ್ಮ ಹವ್ಯಾಸವನ್ನು ಕೈಬಿಟ್ಟಿರಲಿಲ್ಲ. “ಆ ಹಣವನ್ನು ಮನೆಯ ಬೇರೆ ಖರ್ಚುಗಳಿಗೆ ಬಳಸಬಹುದಲ್ಲ ಎಂದು ನನ್ನ ಪತ್ನಿ ಆಗಾಗ ದೂರುತ್ತಿದ್ದಳು. ಹಾಗಾಗಿ, ಕೆಲವು ತಿಂಗಳು ನಾನು ಟಿಕೆಟ್ ಖರೀದಿಸಿದ ವಿಷಯವನ್ನು ಆಕೆಗೆ ಹೇಳುತ್ತಲೇ ಇರಲಿಲ್ಲ” ಎಂದು ವಿಬೀಶ್ ನಗುಮೊಗದಿಂದಲೇ ಹೇಳಿಕೊಂಡಿದ್ದಾರೆ. ಅವರ ಈ 15 ವರ್ಷಗಳ ಸತತ ಪ್ರಯತ್ನಕ್ಕೆ ಈಗ ಭರ್ಜರಿ ಫಲ ಸಿಕ್ಕಿದೆ.
ತಾಯ್ನಾಡಿಗೆ ಮರಳುವ ಕನಸು
ಈ ಬೃಹತ್ ಮೊತ್ತದ ಬಹುಮಾನ ಗೆದ್ದಿರುವ ವಿಬೀಶ್, ಶೀಘ್ರದಲ್ಲೇ ಭಾರತಕ್ಕೆ ಮರಳಿ ತಮ್ಮ ತಾಯ್ನಾಡಿನಲ್ಲಿಯೇ ನೆಲೆಸುವ ನಿರ್ಧಾರ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ತಮ್ಮ ಪುತ್ರಿ ವಂದನಾಳ ಭವಿಷ್ಯವನ್ನು ಭದ್ರಪಡಿಸಲು ಈ ಹಣವನ್ನು ಬಳಸುವುದಾಗಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರದ InStem ಸಂಸ್ಥೆಯಲ್ಲಿ ನೇಮಕಾತಿ.. ಹೀಗೆ ಅರ್ಜಿ ಸಲ್ಲಿಸಿ



















