ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾದಲ್ಲಿ ವಸತಿ ಸಮುಚ್ಛಯವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡವು ಒಂದೇ ಕುಟುಂಬದ ಮೂವರನ್ನು ಬಲಿಪಡೆದಿದೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಶಪಥ್ ಸೊಸೈಟಿ ಎಂವಿಆರ್ ಸ್ಕೂಲ್ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಅವಘಡ ಸಂಭವಿಸಿದೆ. ಅಪಾರ್ಟ್‌ಮೆಂಟ್‌ನ ಮೇಲಿನ ಅಂತಸ್ತಿನ ಫ್ಲ್ಯಾಟ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ಕೆಲವೇ ಕ್ಷಣಗಳಲ್ಲಿ ಅದು ಸುತ್ತಮುತ್ತಲಿನ ಫ್ಲ್ಯಾಟ್ ಗಳಿಗೂ ವ್ಯಾಪಿಸಿದೆ. ಅಗ್ನಿಯ ಜ್ವಾಲೆಯಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು, ತನ್ನಿಬ್ಬರ ಮಕ್ಕಳೊಂದಿಗೆ 7ನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಮೂವರೂ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
8 ಅಗ್ನಿಶಾಮಕ ವಾಹನಗಳ ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ. ಇನ್ನೂ ಇಬ್ಬರಿಂದ ಮೂವರು ಫ್ಲ್ಯಾಟ್ ನೊಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡದಲ್ಲಿ ಭಾರೀ ಪ್ರಮಾಣದ ಹೊಗೆ ಆವರಿಸಿದ್ದು, ಕ್ರಮೇಣ ಬೆಂಕಿಯು ಆಸುಪಾಸಿನ ಕಟ್ಟಡಗಳಿಗೂ ವ್ಯಾಪಿಸುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯು ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಒಳಗಿರುವವರನ್ನು ರಕ್ಷಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ.



















