ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಆದರೆ, ಸಿಎಂ ಮಾತ್ರ ಇದಕ್ಕೆ ವಿಚಲಿತರಾದಂತೆ ಕಾಣುತ್ತಿಲ್ಲ. ಇದರ ಮಧ್ಯೆಯೇ ಸಿಎಂ ಬರೋಬ್ಬರಿ ಎಂಟೂವರೆ ಗಂಟೆಗಳ ಕಾಲ ಸುದೀರ್ಘವಾಗಿ ಮೈಸೂರು ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 17ಎ ಅಡಿ ತನಿಖೆ ನಡೆಸಿ ವರದಿ ನೀಡುವಂತೆ ಕೋರ್ಟ್ ಹೇಳಿದೆ. ಕೋರ್ಟ್ ಆದೇಶದನ್ವಯ FIR ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್ ಆದೇಶದ ಅನ್ವಯ ಲೋಕಾಯುಕ್ತರಿಂದ ತನಿಖೆ ನಡೆಸಿ 90 ದಿನಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿದೆ ಎಂದು ಹೇಳಿದ್ದಾರೆ.
ಚುನಾವಣಾ ಬಾಂಡ್ ವಿಚಾರದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ FIR ಆಗಿದೆ. ಅವರು ರಾಜೀನಾಮೆ ನೀಡುತ್ತಾರಾ? ಚುನಾವಣಾ ಬಾಂಡ್ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುತ್ತಾರಾ? ಎಂದು ಬಿಜೆಪಿ ಸೇರಿದಂತೆ ವಿರೋಧಿಗಳನ್ನು ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ? ಮೊದಲು ಅವರು ರಾಜೀನಾಮೆ ನೀಡಲಿ, ಆನಂತರ ನನಗೆ ಕೇಳಲಿ ಎಂದು ಗುಡುಗಿದ್ದಾರೆ.