ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ತುಮಕೂರಿನಿಂದ ರಾಮನಗರಕ್ಕೆ ನೀರು ಒದಗಿಸುವ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ನಿಷೇಧಾಜ್ಞೆಯ ನಡುವೆಯೂ ರೈತರು, ರಾಜಕೀಯ ಮುಖಂಡರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ನೀರಿಗಾಗಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ಗುಬ್ಬಿ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಿದ್ದಾರೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ ಗೌಡ, ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ ವಿರುದ್ಧ ಕೇಸ್ ದಾಖಲಿಸಲಾಗಿದೆ. ಬಿಜೆಪಿ ಮುಖಂಡರಾದ ದಿಲೀಪ್ ಕುಮಾರ್, ಹೆಬ್ಬಾಕ ರವಿ ಹಾಗೂ ಇಬ್ಬರು ಸ್ವಾಮೀಜಿಗಳ ವಿರುದ್ಧವೂ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆದರೆ, ಸ್ವಾಮೀಜಿಗಳ ಹೆಸರು ಉಲ್ಲೇಖಿಸಿಲ್ಲ.