ಏಕದಿನ ವಿಶ್ವಕಪ್ ಸೋಲಿನ ನೋವು ಮರೆಯಲು ಇಂದು ಭಾರತಕ್ಕೆ ಸುವರ್ಣ ಅವಕಾಶ ಸಿಕ್ಕ ದಿನ. ಟಿ20 ವಿಶ್ವಕಪ್ ಫೈನಲ್ ಗೆ ವೇದಿಕೆ ಸಿದ್ಧವಾಗಿದ್ದು, ಭಾರತ ತಂಡ ದಕ್ಷಿಣ ಆಫ್ರಿಕಾ ತಂಡದ ಸವಾಲು ಎದುರಿಸಿ ಗೆಲುವು ಸಾಧಿಸಿ ಕಪ್ ಎತ್ತಿ ಹಿಡಿಯಲಿ ಎಂದು ಭಾರತೀಯ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಇನ್ನೇನು ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು. ಏಕೆಂದರೆ ಉಭಯ ತಂಡಗಳು ಈ ಬಾರಿಯ ವಿಶ್ವಕಪ್ ನಲ್ಲಿ ಸೋಲಿಲ್ಲದ ಸರದಾರರಾಗಿ ಫೈನಲ್ ಗೆ ಎಂಟ್ರಿ ಕೊಟ್ಟಿವೆ. ಟೀಮ್ ಇಂಡಿಯಾ ಆಡಿರುವ 7 ಪಂದ್ಯಗಳಲ್ಲೂ ವಿಜಯ ಸಾಧಿಸಿದರೆ, ಅತ್ತ ಸೌತ್ ಆಫ್ರಿಕಾ 8 ಪಂದ್ಯಗಳಲ್ಲಿ ಗೆದ್ದು ಗೆದ್ದು ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಹೀಗಾಗಿ ಫೈನಲ್ನಲ್ಲಿ ಭರ್ಜರಿ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.

ಟಿ20 ಕ್ರಿಕೆಟ್ ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಇಲ್ಲಿಯವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ 13 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ.
ಇನ್ನು ಟಿ20 ವಿಶ್ವಕಪ್ ನ್ನ್ನು ನೋಡುವುದಾದರೆ ಉಭಯ ತಂಡಗಳು ಒಟ್ಟು 6 ಬಾರಿ ಪರಸ್ಪರ ಕಣಕ್ಕಿಳಿದಿವೆ. ಈ ವೇಳೆ ಟೀಮ್ ಇಂಡಿಯಾ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಸೌತ್ ಆಫ್ರಿಕಾ ಗೆದ್ದಿರುವುದು ಕೇವಲ 2 ಬಾರಿ ಮಾತ್ರ. ಇಂದಿನ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ನೆಟ್ವರ್ಕ್ನ ಎಲ್ಲಾ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಉಚಿತ ನೇರ ಪ್ರಸಾರ ಇರಲಿದೆ.
