ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಧ್ಯೇಯದೊಂದಿಗೆ ಮಾರ್ಚ್ 1 ರಿಂದ 8 ರವರೆಗೆ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
60ಕ್ಕೂ ಹೆಚ್ಚು ದೇಶಗಳ ಚಲನಚಿತ್ರಗಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, 200 ಚಲನಚಿತ್ರಗಳು 13 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿವೆ. ಒರಾಯನ್ ಮಾಲ್ ನಲ್ಲಿ 11 ಪರದೆಗಳು, ಸುಚಿತ್ರಾ ಫಿಲಂ ಸೊಸೈಟಿ ಹಾಗೂ ಕಲಾವಿದರ ಸಂಘದಲ್ಲಿ ತಲಾ ಒಂದು ಪರದೆಯಲ್ಲಿ ಚಿತ್ರ ಪ್ರದರ್ಶನಗೊಳ್ಳಲಿವೆ. ಕನ್ನಡ ಸೇರಿದಂತೆ ಇತರೆ ಭಾಷೆಗಳ 400 ಚಿತ್ರ ಪ್ರದರ್ಶನಗಳು ನಡೆಯಲಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ 7 ಕೋಟಿ ರೂ. ವೆಚ್ಚ ಆಗಿತ್ತು. ಈ ಬಾರಿ 9 ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ. ಸಮಯಾವಕಾಶವಾದರೆ, ಚಲನಚಿತ್ರೋತ್ಸವದಲ್ಲಿ ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸಲು ಪ್ರಯತ್ನಿಸುತ್ತೇನೆ ಎಂದರು.
‘ಕನ್ನಡ ಚಲನಚಿತ್ರಗಳಿಗೆ ಉತ್ತೇಜನ ನೀಡುವಂತಹ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸುತ್ತಾ ಬಂದಿದೆ. ಕನ್ನಡ ಚಲನಚಿತ್ರಗಳ ಸಹಾಯಧನಕ್ಕಾಗಿ ಆಯ್ಕೆ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ಚಿತ್ರಗಳನ್ನು ವೀಕ್ಷಿಸುತ್ತಿದೆ. ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸಲು ಸರ್ಕಾರ ಈಗಾಗಲೇ 110 ಎಕರೆ ವಿಸ್ತೀರ್ಣದ ಜಮೀನನ್ನು ಮಂಜೂರು ಮಾಡಿದ್ದು, ಪಿಪಿಪಿ ಮಾದರಿಯಲ್ಲಿ ಚಿತ್ರನಗರಿಯನ್ನು ನಿರ್ಮಾಣದ ಯೋಜನೆ ಅನುಷ್ಠಾನಗೊಳಿಸಲಾಗುವುದು‘ ಎಂದು ಸಿಎಂ ತಿಳಿಸಿದರು.