ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯ ಚಿಕ್ಕಕುರುಗೋಡು ಗ್ರಾಮದಲ್ಲಿ ಐಶಾರಾಮಿ ಕಾರುಗಳಲ್ಲಿ ಬಂದಿದ್ದ ಕಳ್ಳರು ಎರಡು ಮನೆಗಳಲ್ಲಿ ದರೋಡೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮನೆಗಳ ಬೀಗಗಳನ್ನು ಒಡೆದು ಚಿನ್ನ, ಬೆಳ್ಳಿ, ನಗದು ಸೇರಿದಂತೆ ಹಲವು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಚಲನವಲನ ಸ್ಪಷ್ಟವಾಗಿ ಕಾಣಿಸಿಕೊಂಡಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಳ್ಳರು ಟಯೋಟಾ ಇನೋವಾ ಮತ್ತು ಮಹೀಂದ್ರಾ ಸ್ಕಾರ್ಪಿಯೋ ಕಾರುಗಳಲ್ಲಿ ಬಂದಿರುವುದು ಪತ್ತೆಯಾಗಿದೆ. ಐಶಾರಾಮಿ ವಾಹನಗಳನ್ನು ಬಳಸಿಕೊಂಡು ಕಳ್ಳತನ ನಡೆಸಿರುವುದು ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ.
ಘಟನಾ ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಪದೇಪದೇ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ಗೌರಿಬಿದನೂರು ತಾಲ್ಲೂಕಿನ ಜನತೆ ಬೆಚ್ಚಿಬಿದ್ದಿದ್ದಾರೆ. ಕಳ್ಳರ ಹಾವಳಿ ಹೆಚ್ಚುತ್ತಿರುವುದರಿಂದ ರೋಸಿಹೋಗಿರುವ ಸಾರ್ವಜನಿಕರು, ಕೂಡಲೇ ಕಳ್ಳರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಡೈರಿ ಅವ್ಯವಸ್ಥೆ ಖಂಡಿಸಿ ರಸ್ತೆಗೆ ಹಾಲು ಸುರಿದು ರೈತರ ಆಕ್ರೋಶ



















