ನವದೆಹಲಿ : ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಹತ್ವದ ಹೆಜ್ಜೆಯಿಟ್ಟಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ಸೋಮವಾರ ನಡೆಯಲಿರುವ ವಿಚಾರಣೆ ವೇಳೆ ಖುದ್ದಾಗಿ ತಾವೇ ವಾದ ಮಂಡಿಸಲು ನಿರ್ಧರಿಸಿದ್ದಾರೆ.
ನ್ಯಾಯಾಧೀಶರ ಬದಲಾವಣೆಗೆ ಕೇಜ್ರಿವಾಲ್ ಪಟ್ಟು
ಅಬಕಾರಿ ಪ್ರಕರಣದಲ್ಲಿ ತಮ್ಮನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಿಬಿಐ (CBI) ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಈ ಮೇಲ್ಮನವಿಗೆ ಪ್ರತಿಕ್ರಿಯಿಸಲು ಮಾರ್ಚ್ 16ರಂದು ಹೈಕೋರ್ಟ್ ಕೇಜ್ರಿವಾಲ್ ಮತ್ತು ಇತರ 22 ಜನರಿಗೆ ಹೆಚ್ಚಿನ ಕಾಲಾವಕಾಶ ನೀಡಿ, ವಿಚಾರಣೆಯನ್ನು ಏಪ್ರಿಲ್ 6ಕ್ಕೆ ಮುಂದೂಡಿತ್ತು. ಇದೀಗ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರ ಪೀಠವು ಈ ವಿಚಾರಣೆಯಿಂದ ಹಿಂದೆ ಸರಿಯಬೇಕೆಂದು ಕೋರಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ಮಾರ್ಚ್ 11ರಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿಗೆ ಪತ್ರ ಬರೆದಿದ್ದ ಕೇಜ್ರಿವಾಲ್ ಮತ್ತು ಇತರರು, ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಕೋರಿದ್ದರು. ಮಾರ್ಚ್ 9ರಂದು ನಡೆದ ಮೊದಲ ವಿಚಾರಣೆಯ ಸಂದರ್ಭದಲ್ಲಿಯೇ, ತಮ್ಮ ವಾದವನ್ನು ಆಲಿಸದೆ ಕೆಳ ನ್ಯಾಯಾಲಯದ ಆದೇಶವನ್ನು ‘ಮೇಲ್ನೋಟಕ್ಕೆ ದೋಷಪೂರಿತ’ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದರು. ಹೀಗಾಗಿ, ಈ ಪೀಠದಿಂದ ನಿಷ್ಪಕ್ಷಪಾತ ಅಥವಾ ತಟಸ್ಥ ವಿಚಾರಣೆ ನಡೆಯುವ ಬಗ್ಗೆ ತಮಗೆ ಅನುಮಾನವಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಆದರೆ, ಮಾರ್ಚ್ 13ರಂದು ಮುಖ್ಯ ನ್ಯಾಯಮೂರ್ತಿಗಳು ಈ ಕೋರಿಕೆಯನ್ನು ತಿರಸ್ಕರಿಸಿದ್ದರು.
ಕೆಳ ನ್ಯಾಯಾಲಯದಲ್ಲಿ ಏನಾಗಿತ್ತು?
ಫೆಬ್ರವರಿ 27ರಂದು ಅಬಕಾರಿ ಹಗರಣದ ವಿಚಾರಣೆ ನಡೆಸಿದ್ದ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು, ಸಿಬಿಐ ಕಲೆಹಾಕಿರುವ ಸಾಕ್ಷ್ಯಾಧಾರಗಳು ಮೇಲ್ನೋಟಕ್ಕೆ ಯಾವುದೇ ಗಂಭೀರ ಆರೋಪಗಳನ್ನು ಸಾಬೀತುಪಡಿಸುತ್ತಿಲ್ಲ ಎಂದು ಹೇಳಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ 22 ಮಂದಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದರು. ಜೊತೆಗೆ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಹೊರಿಸಿದ ಹಾಗೂ ನ್ಯಾಯಸಮ್ಮತವಲ್ಲದ ತನಿಖೆ ನಡೆಸಿದ ಸಿಬಿಐ ತನಿಖಾಧಿಕಾರಿಯ ವಿರುದ್ಧ ಇಲಾಖಾ ತನಿಖೆಗೂ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. ಮಾರ್ಚ್ 9ರಂದು ಸಿಬಿಐ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶರ್ಮಾ ಅವರು, ತನಿಖಾಧಿಕಾರಿ ವಿರುದ್ಧದ ಇಲಾಖಾ ತನಿಖೆಯ ಕ್ರಮಕ್ಕೆ ತಡೆಯಾಜ್ಞೆ ನೀಡಿದ್ದರು. ಜೊತೆಗೆ, ಸಿಬಿಐ ಮೇಲ್ಮನವಿಯ ತೀರ್ಪು ಬರುವವರೆಗೆ ಜಾರಿ ನಿರ್ದೇಶನಾಲಯದ (ಇಡಿ) ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ಮುಂದೂಡುವಂತೆ ಕೆಳ ನ್ಯಾಯಾಲಯಕ್ಕೆ ಸೂಚಿಸಿದ್ದರು.
ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಗೌರವವಿಲ್ಲವೇ ಎಂದ ಬಿಜೆಪಿ
ಕೇಜ್ರಿವಾಲ್ ಅವರ ಈ ನಡೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಪ್ರತಿಕ್ರಿಯಿಸಿ, “ಎಲ್ಲಾ ರಂಗಗಳಲ್ಲೂ ಸೋತು ಹತಾಶರಾಗಿರುವ ಅರವಿಂದ್ ಕೇಜ್ರಿವಾಲ್ ಅವರ ನೈಜ ಬಣ್ಣ ಇದರಿಂದ ಬಯಲಾಗಿದೆ. ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಸಲ್ಲಿಸಿದ್ದ ಅರ್ಜಿಯಲ್ಲಿ ಸೋತ ನಂತರ, ಇದೀಗ ನೇರವಾಗಿ ಅದೇ ನ್ಯಾಯಾಧೀಶರ ಮುಂದೆ ಪ್ರಕರಣ ಕೈಬಿಡುವಂತೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದು ನ್ಯಾಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅವರಿಗಿರುವ ಗೌರವವೇ?” ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಮನೆ ಮುಂದೆ ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿನಾಯಿಗಳು ಅಟ್ಯಾಕ್.. ಇಬ್ಬರಿಗೆ ಗಾಯ



















