ಬೆಳ್ತಂಗಡಿ : ಧರ್ಮಸ್ಥಳದಲ್ಲಿ ಅಸಹಜ ಸಾವೀಗೀಡಾಗಿದ್ದ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡುವ ಮೂಲಕ ತಾನೊಬ್ಬ ಸಾಕ್ಷಿ ದೂರುದಾರ ಎಂದು ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದ ಅನಾಮಿಕನನ್ನು ಎಸ್.ಐ.ಟಿ ಪೊಲೀಸರು ಬಂಧಿಸಿದ್ದಾರೆ. ಆತನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿದ ಬೆನ್ನಲ್ಲಿಯೇ ಮುಸುಕುದಾರಿ ಅನಾಮಿಕನ ಹೆಸರು ಸಿ.ಎನ್. ಚಿನ್ನಯ್ಯ ಎಂದೂ ಹಾಗೂ ಆತನ ಮೂಲವನ್ನು ಬಹಿರಂಗಗೊಳಿಸಿದೆ.
ಧರ್ಮಸ್ಥಳದ ಪ್ರಕರಣದಲ್ಲಿ ದೂರುದಾರನಾಗಿದ್ದ ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ, ಇದೀಗ ಆರೋಪಿಯಾಗಿ ಪರಿವರ್ತನೆಯಾಗಿದ್ದಾನೆ. ಎಸ್‌ಐಟಿ ತಂಡದಿಂದ ಬಂಧಿಸಲ್ಪಟ್ಟಿದ್ದಾನೆ. ನಿನ್ನೆ(ಶುಕ್ರವಾರ) ಮಧ್ಯಾಹ್ನವೇ ಮಂಗಳೂರಿನ ಸಕ್ರಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ ಎಸ್‌ಐಟಿ, ಚಿನ್ನಯ್ಯನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಭದ್ರತೆಯನ್ನು ಹಿಂಪಡೆದುಕೊಳ್ಳುವಂತೆ ಕೋರಲಾಗಿತ್ತು.
ಎಸ್‌ಐಟಿ ಸಲ್ಲಿಸಿದ ಮನವಿಯಲ್ಲಿ ಕೆಲವು ಮಹತ್ವದ ಸಾಕ್ಷ್ಯಗಳನ್ನು ನೀಡಲಾಗಿತ್ತು, ಇದು ಚಿನ್ನಯ್ಯ ನೀಡಿದ ಹೇಳಿಕೆಗಳು ಸುಳ್ಳು ಎಂದು ಸಾಬೀತುಪಡಿಸಿದವು. ಈ ಸಾಕ್ಷ್ಯಗಳ ಆಧಾರದ ಮೇಲೆ, ಸಕ್ರಮ ಪ್ರಾಧಿಕಾರವು ಆತನ ಸಾಕ್ಷಿ ಸಂರಕ್ಷಣೆಯನ್ನು ರದ್ದುಗೊಳಿಸಿದೆ. ಈ ಕ್ರಮದ ಬೆನ್ನಲ್ಲೇ, ಎಸ್‌ಐಟಿ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ. ಆರಂಭದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿ ಈಗ ಆರೋಪಿಯ ಸ್ಥಾನಕ್ಕೆ ಬಂದು ನಿಂತಿದ್ದು, ಇದು ತನಿಖೆಯ ದಿಕ್ಕಿನಲ್ಲಿ ಮಹತ್ವದ ತಿರುವನ್ನು ತಂದಿದೆ.


















