ಬೆಂಗಳೂರು: ಖಾಸಗಿ ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಪಿಂಚಣಿ, ನಿವೃತ್ತಿ ಬಳಿಕ ಉತ್ತಮ ಮೊತ್ತ, ಉಳಿತಾಯಕ್ಕೆ ಭಾರಿ ನೆರವಾಗುತ್ತಿದೆ. ಸುಮಾರು 7 ಕೋಟಿ ಇಪಿಎಫ್ಒ ಸದಸ್ಯರು ಈ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಪಿಎಫ್ಒ ಮೊತ್ತಕ್ಕೆ ಕೇಂದ್ರ ಸರ್ಕಾರವು ಪ್ರತಿ ವರ್ಷ ಶೇ.8.25ರಷ್ಟು ಬಡ್ಡಿಯನ್ನೂ ನೀಡುತ್ತದೆ. ಅಷ್ಟೇ ಅಲ್ಲ, ಇಪಿಎಫ್ಒ ಸದಸ್ಯರಿಗೆ 7 ಲಕ್ಷ ರೂಪಾಯಿವರೆಗೆ ವಿಮಾ ಸುರಕ್ಷತೆಯೂ ಇರುತ್ತದೆ.
ಹೌದು, ಇಪಿಎಫ್ಒ ಸದಸ್ಯರಿಗೆ 2.5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿವರೆಗೆ ವಿಮಾ ಸೌಲಭ್ಯವಿದೆ. ಆಯಾ ಸದಸ್ಯರ ಕಳೆದ 12 ತಿಂಗಳ ಸಂಬಳದ ಆಧಾರದ ಮೇಲೆ ವಿಮಾ ಸುರಕ್ಷತೆ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇಪಿಎಫ್ಒ ಸದಸ್ಯರು ಅಕಸ್ಮಾತ್ ಮೃತಪಟ್ಟರೆ, ಅವರ ಕುಟುಂಬಸ್ಥರಿಗೆ 7 ಲಕ್ಷ ರೂ. ವಿಮಾ ಮೊತ್ತವನ್ನು ನೀಡಲಾಗುತ್ತದೆ.
ವಿಮಾ ಸುರಕ್ಷತೆಗೆ ಪಿಎಫ್ ಸದಸ್ಯರು ಯಾವುದೇ ಪ್ರೀಮಿಯಂ ಕೂಡ ಪಾವತಿಸಬೇಕಿಲ್ಲ. ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆಯಡಿ ಎಲ್ಲ ಪಿಎಫ್ ಚಂದಾದಾರರಿಗೆ ವಿಮಾ ಸೌಲಭ್ಯ ಒದಗಿಸಲಾಗುತ್ತದೆ. ಇದಕ್ಕಾಗಿ ನೀವು ಒಂದು ರೂಪಾಯಿಯನ್ನೂ ಖರ್ಚು ಮಾಡಬೇಕಿಲ್ಲ. ಕಂಪನಿಯ ಆಡಳಿತವು ಪ್ರತಿ ಉದ್ಯೋಗಿಯ ಪಿಎಫ್ ಸಂಬಳದ ಶೇ.0.5 ರಷ್ಟನ್ನು ಪಾವತಿಸುತ್ತದೆ. ಕಂಪನಿಯು ಪ್ರತಿ ಉದ್ಯೋಗಿಗೆ ಗರಿಷ್ಠ 75 ರೂಪಾಯಿ ಪ್ರೀಮಿಯಂ ಪಾವತಿಸುತ್ತದೆ.
ಯಾರೇ ಆಗಲಿ, ಪಿಎಫ್ ಖಾತೆ ಹೊಂದಿದ್ದರೆ, ಅದರಲ್ಲಿ ಠೇವಣಿ ಇಟ್ಟ ಹಣಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಐಟಿ ಕಾಯ್ದೆಯ ಸೆಕ್ಷನ್ 80 ಸಿ ಪ್ರಕಾರ, ನೀವು ವರ್ಷಕ್ಕೆ 1.50 ಲಕ್ಷ ರೂಪಾಯಿವರೆಗೆ ವಿನಾಯಿತಿ ಪಡೆಯಬಹುದು. ಆದರೆ, ಇದು ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡವರಿಗೆ ಮಾತ್ರ ಅನ್ವಯಿಸುತ್ತದೆ.