ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಮಧ್ಯೆ ನಡೆದ ಮೊದಲ ಟೆಸ್ಟ್ ನಲ್ಲಿ ಪಾಕ್ ಹೀನಾಯವಾಗಿ ಸೋತಿದೆ.
ಮೊದಲ ಇನ್ನಿಂಗ್ಸ್ ನ ಬ್ಯಾಟಿಂಗ್ ನಲ್ಲಿ ಭರ್ಜರಿ ಪ್ರದರ್ಶನ ತೋರಿದ್ದ ಪಾಕ್ ಗೆ ಬೌಲರ್ ಗಳು ಕೈ ಕೊಟ್ಟರು. ಆದರೆ, ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟ್ಸಮನ್ ಗಳು ಕೈ ಕೊಟ್ಟ ಪರಿಣಾಮ ಇನ್ನಿಂಗ್ಸ್ ಹಾಗೂ 47 ರನ್ ಗಳ ಸೋಲು ಕಂಡಿತು.
ಪಾಕಿಸ್ತಾನದ ಈ ಸೋಲಿನೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅಂಕ ಪಟ್ಟಿಯಲ್ಲಿ ಬದಲಾವಣೆಯಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡ ಮುನ್ನಡೆ ಸಾಧಿಸಿದರೆ, ಪಾಕಿಸ್ತಾನ್ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ಮೂಲಕ ಪಾಕಿಸ್ತಾನ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ರೇಸ್ ನಿಂದ ಬಹುತೇಕ ಹಿಂದೆ ಸರಿದಂತಾಗಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಇಂಗ್ಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಸುಧಾರಿಸಿದೆ. ಈ ಗೆಲುವಿನ ಮೂಲಕ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಇಂಗ್ಲೆಂಡ್ ತಂಡ ಇಲ್ಲಿಯವರೆಗೆ ಆಡಿರುವ 17 ಪಂದ್ಯಗಳಲ್ಲಿ 9 ಗೆಲುವು ಮತ್ತು 7 ಸೋಲಿನೊಂದಿಗೆ 93 ಅಂಕಗಳನ್ನು ಗಳಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಫೈನಲ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಈ ಟೆಸ್ಟ್ಗೂ ಮುನ್ನ ಬಾಂಗ್ಲಾದೇಶ ತಂಡದ ವಿರುದ್ಧ ಪಾಕಿಸ್ತಾನ ತಂಡ ಹೀನಾಯ ಸೋಲು ಕಂಡಿತ್ತು. ಈ ಸೋಲು ಕೂಡ ಪಾಕ್ ಗೆ ತೀವ್ರ ಮುಖಭಂಗ ಸೃಷ್ಟಿಸಿದೆ. ಪಾಕಿಸ್ತಾನ ತಂಡ ಇಲ್ಲಿಯವರೆಗೆ ಆಡಿರುವ 8 ಪಂದ್ಯಗಳಲ್ಲಿ 6 ರಲ್ಲಿ ಸೋಲು ಕಂಡು, ಎರಡರಲ್ಲಿ ಮಾತ್ರ ಜಯ ಗಳಿಸಿದೆ. ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ತಂಡ ಇನಿಂಗ್ಸ್ ಮತ್ತು 47 ರನ್‌ಗಳಿಂದ ಗೆದ್ದು ಬೀಗಿದೆ. ಮೊದಲ ಇನಿಂಗ್ಸ್ ನಲ್ಲಿ 550ಕ್ಕೂ ಹೆಚ್ಚು ರನ್ ಗಳಿಸಿದ್ದರೂ ಪಾಕಿಸ್ತಾನ ಹೀನಾಯ ಸೋಲು ಕಂಡಿತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಬರೋಬ್ಬರಿ 823 ರನ್ ಗಳಿಸಿದ್ದು, ಪಾಕ್ ಗೆ ನುಂಗಲಾರದ ತುತ್ತಾಯಿತು. ಈ ಮೂಲಕ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ.