ಟೆಹ್ರಾನ್ : ಪಶ್ಚಿಮ ಏಷ್ಯಾ ವಲಯದಲ್ಲಿರುವ ಅಮೆರಿಕದ ಯುದ್ಧನೌಕೆಗಳು, ಯುದ್ಧ ವಿಮಾನಗಳು ಹಾಗೂ ಇತರ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್ ಕಳೆದ 8 ದಿನಗಳಿಂದ ನಿರಂತರವಾಗಿ ದಾಳಿ ನಡೆಸುತ್ತಲೇ ಇದೆ. ಅಲ್ಲಿರುವ ಅಮೆರಿಕದ ನೆಲೆಗಳು, ಮೂಲಸೌಕರ್ಯಗಳ ಕುರಿತ ಮಹತ್ವದ ಗುಪ್ತಚರ ಮಾಹಿತಿಯನ್ನು ಇರಾನ್‌ಗೆ ಒದಗಿಸುತ್ತಿರುವುದು ಮತ್ಯಾರೂ ಅಲ್ಲ, ರಷ್ಯಾ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಅಮೆರಿಕದ ಗುಪ್ತಚರ ವರದಿಗಳ ಬಗ್ಗೆ ಸ್ಪಷ್ಟ ಮಾಹಿತಿ ಇರುವ ಇಬ್ಬರು ಅಧಿಕಾರಿಗಳು ಈ ವಿಷಯವನ್ನು ಅಸೋಸಿಯೇಟೆಡ್ ಪ್ರೆಸ್ (AP)ಗೆ ಬಹಿರಂಗಪಡಿಸಿದ್ದಾರೆ. ಆದರೆ, ಈ ಮಾಹಿತಿಯನ್ನು ಹೇಗೆ ಬಳಸಬೇಕು ಎಂಬುದರ ಕುರಿತು ರಷ್ಯಾವು ಇರಾನ್‌ಗೆ ಯಾವುದೇ ನೇರ ನಿರ್ದೇಶನ ನೀಡುತ್ತಿರುವ ಬಗ್ಗೆ ಇದುವರೆಗೆ ಯಾವುದೇ ಪುರಾವೆ ಸಿಕ್ಕಿಲ್ಲ ಎನ್ನಲಾಗಿದೆ. ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬೃಹತ್ ಕಾರ್ಯಾಚರಣೆ ನಡೆಸಿ, ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆಗೈದಿದ್ದವು. ಇದಕ್ಕೆ ಪ್ರತಿಯಾಗಿ ಇರಾನ್, ಪರ್ಷಿಯನ್ ಕೊಲ್ಲಿಯಲ್ಲಿರುವ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳ ನೆಲೆಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಳ್ಳುತ್ತಿರುವ ಈ ಹೊತ್ತಿನಲ್ಲಿ, ರಷ್ಯಾವು ಇರಾನ್‌ಗೆ ಕಾರ್ಯಾಚರಣೆಯ ಬೆಂಬಲ ನೀಡುತ್ತಿರುವುದರ ಮೊದಲ ಸ್ಪಷ್ಟ ಸುಳಿವು ಇದಾಗಿದೆ.
ವರದಿ ತಳ್ಳಿಹಾಕಿದ ಶ್ವೇತಭವನ
ಶ್ವೇತಭವನದ ಕಾರ್ಯಕ್ರಮವೊಂದರಲ್ಲಿ ಈ ವರದಿಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. “ಇದೊಂದು ಮೂರ್ಖತನದ ಪ್ರಶ್ನೆ. ನಾವು ಬೇರೆಯದೇ ವಿಚಾರದ ಬಗ್ಗೆ ಮಾತನಾಡುತ್ತಿದ್ದೇವೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೋಲಿನ್ ಲೀವಿಟ್ ಕೂಡ ಈ ಗುಪ್ತಚರ ಮಾಹಿತಿ ಹಂಚಿಕೆಯ ಪ್ರಾಮುಖ್ಯತೆಯನ್ನು ಅಲ್ಲಗಳೆದಿದ್ದಾರೆ. “ನಾವು ಇರಾನ್ ಅನ್ನು ಸಂಪೂರ್ಣವಾಗಿ ನಾಶಮಾಡುತ್ತಿದ್ದೇವೆ. ಹಾಗಾಗಿ, ಈ ಗುಪ್ತಚರ ಮಾಹಿತಿಯು ನಮ್ಮ ಸೇನಾ ಕಾರ್ಯಾಚರಣೆಯ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುತ್ತಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಮಾತನಾಡಿ, “ಯಾರು ಯಾರೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದಾರೆ ಎಂಬುದು ನಮ್ಮ ಕಮಾಂಡರ್ ಇನ್ ಚೀಫ್‌ಗೆ ಚೆನ್ನಾಗಿ ತಿಳಿದಿದೆ. ತೆರೆಯ ಹಿಂದೆ ಏನೇ ನಡೆಯುತ್ತಿದ್ದರೂ ಅದನ್ನು ನಾವು ಎದುರಿಸಲಿದ್ದೇವೆ” ಎಂದು ಎಚ್ಚರಿಸಿದ್ದಾರೆ.

ಗುಟ್ಟು ಬಿಟ್ಟುಕೊಡದ ಕ್ರೆಮ್ಲಿನ್
ಇರಾನ್‌ಗೆ ಸೇನಾ ಅಥವಾ ಗುಪ್ತಚರ ನೆರವು ನೀಡುತ್ತಿರುವ ಬಗ್ಗೆ ರಷ್ಯಾದ ಕ್ರೆಮ್ಲಿನ್ ದೃಢೀಕರಿಸಿಲ್ಲ ಅಥವಾ ನಿರಾಕರಿಸಿಲ್ಲ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪ್ರತಿಕ್ರಿಯಿಸಿ, “ನಾವು ಇರಾನ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಖಂಡಿತವಾಗಿಯೂ ಈ ಸಂವಾದ ಮುಂದುವರಿಯುತ್ತದೆ” ಎಂದಷ್ಟೇ ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿದಾಗಿನಿಂದಲೂ ರಷ್ಯಾ ಮತ್ತು ಇರಾನ್ ನಡುವಿನ ಬಾಂಧವ್ಯ ವೃದ್ಧಿಯಾಗಿದೆ. ಇರಾನ್ ಈಗಾಗಲೇ ರಷ್ಯಾಕ್ಕೆ ‘ಶಾಹೆದ್’ ಡ್ರೋನ್‌ಗಳನ್ನು ಮತ್ತು ಅಲ್ಪ-ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪೂರೈಸಿದೆ ಎಂದು ಅಮೆರಿಕ ಆರೋಪಿಸುತ್ತಾ ಬಂದಿದೆ.
ಇರಾನ್ ಡ್ರೋನ್‌ಗಳ ವಿರುದ್ಧ ಅಮೆರಿಕಕ್ಕೆ ಉಕ್ರೇನ್ ಸಾಥ್
ಈ ಉದ್ವಿಗ್ನತೆಯ ನಡುವೆ, ಇರಾನ್‌ನ ‘ಶಾಹೆದ್’ ಡ್ರೋನ್‌ಗಳನ್ನು ಎದುರಿಸುವ ನಿಟ್ಟಿನಲ್ಲಿ ಅಮೆರಿಕ ಮತ್ತು ಮಧ್ಯಪ್ರಾಚ್ಯದ ಪಾಲುದಾರರಿಗೆ ಉಕ್ರೇನ್ ತನ್ನ ತಾಂತ್ರಿಕ ಪರಿಣತಿಯನ್ನು ನೀಡಲು ಮುಂದಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ದಾಳಿಗೆ ಬಳಕೆಯಾಗುತ್ತಿರುವ ಈ ಡ್ರೋನ್‌ಗಳ ವಿರುದ್ಧ ರಕ್ಷಣೆ ಪಡೆಯಲು ವಾಷಿಂಗ್ಟನ್ ಮತ್ತು ಹಲವಾರು ಪ್ರಾದೇಶಿಕ ಸರ್ಕಾರಗಳು ಕೀವ್‌ನ ನೆರವು ಕೋರಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ. “ನಮ್ಮ ನಗರಗಳು ಬಹುತೇಕ ಪ್ರತಿದಿನ ಶಾಹೆದ್ ಡ್ರೋನ್ ದಾಳಿಗಳನ್ನು ಎದುರಿಸಿವೆ. ಹಾಗಾಗಿ, ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ನಮ್ಮ ಪಾಲುದಾರರಿಗೆ ಅಗತ್ಯವಿದ್ದಾಗ ಸಹಾಯ ಮಾಡಲು ನಾವು ಸದಾ ಸಿದ್ಧ” ಎಂದು ಅಮೆರಿಕದಲ್ಲಿರುವ ಉಕ್ರೇನ್ ರಾಯಭಾರಿ ಓಲ್ಗಾ ಸ್ಟೆಫಾನಿಶಿನಾ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಶಿಕಾರಿಪುರದಲ್ಲಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ



















