ಐಪಿಎಲ್ (IPL 2025) ಸೀಸನ್ 18ಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಕೆಲವು ಬದಲಾವಣೆಯಾಗುತ್ತಿರುವ ಸುಳಿವು ಸಿಕ್ಕಿದೆ.
ತಂಡದಿಂದ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ರಿಲೀಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿರಿಯ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ಆರ್ ಸಿಬಿ ಮುಂದಾಗುತ್ತಿಲ್ಲ. ಹೀಗಾಗಿ ಈ ಇಬ್ಬರೂ ಮತ್ತೆ ಹರಾಜಿನಲ್ಲಿ ಕಾಣಿಸಲಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ KGF (ಕೊಹ್ಲಿ, ಗ್ಲೆನ್, ಫಾಫ್) ಈ ಇಬ್ಬರು ಸ್ಟಾರ್ ಆಟಗಾರರು ತಂಡದಿಂದ ಹೊರಗೆ ಹೋಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಆರ್ಸಿಬಿ ತಂಡದ ಸ್ಟಾರ್ ಆಟಗಾರರಾಗಿದ್ದರು. ಹೀಗಾಗಿ ಅವರನ್ನು ಕೆಜಿಎಫ್ ಜೋಡಿ ಎಂದೇ ಅಭಿಮಾನಿಗಳು ಕರೆಯುತ್ತಿದ್ದರು. ಈಗ ಈ ಜೋಡಿ ಬೇರ್ಪಡಲಿದೆ.
ಮುಂಬರುವ ಸೀಸನ್ ನಲ್ಲಿ ಆರ್ ಸಿಬಿ ತಂಡವನ್ನು ಹೊಸ ನಾಯಕ ಮುನ್ನಡೆಸುವ ಸಾಧ್ಯತೆಯಿದೆ. 2022 ರಿಂದ ಆರ್ ಸಿಬಿ ತಂಡವನ್ನು ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ದರು. 45 ಪಂದ್ಯಗಳಲ್ಲಿ ಆರ್ಸಿಬಿ ಪರ ಕಣಕ್ಕಿಳಿದಿರುವ ಫಾಫ್ 15 ಅರ್ಧಶತಕಗಳೊಂದಿಗೆ ಒಟ್ಟು 1,636 ರನ್ ಗಳಿಸಿದ್ದಾರೆ. ಸದ್ಯ ಡುಪ್ಲೆಸಿಸ್ ಗೆ 40 ವರ್ಷ ದಾಟಿರುವ ಹಿನ್ನೆಲೆಯಲ್ಲಿ ತಂಡವು ಕೈ ಬಿಡಲು ನಿರ್ಧಾರ ಮಾಡಿದೆ ಎನ್ನಲಾಗುತ್ತಿದೆ.
ಗ್ಲೆನ್ ಮ್ಯಾಕ್ಸ್ವೆಲ್ 2024 ರಲ್ಲಿ 10 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 5.78 ಸರಾಸರಿ ಕೇವಲ 52 ರನ್ ಮಾತ್ರ ಗಳಿಸಿದ್ದರು. ಒಂದೇ ಸೀಸನ್ ನಲ್ಲಿ 5 ಬಾರಿ ಸೊನ್ನೆಗೆ ಔಟಾಗಿದ್ದರು. ಈ ಹಿನ್ನೆಲೆಯಲ್ಲಿ ಆರ್ ಸಿಬಿ ಮ್ಯಾಕ್ಸ್ ವೆಲ್ ರನ್ನು ರಿಲೀಸ್ ಮಾಡಲು ಮುಂದಾಗಿದೆ.