ಶಿವಮೊಗ್ಗ: ಮದ್ಯದ ಅಮಲಿನಲ್ಲಿದ್ದ ವೈದ್ಯನ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ನಗರದ ವಿನೋಬ ನಗರದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ವೈದ್ಯ ಚಲಾಯಿಸುತ್ತಿದ್ದ ಕಾರು, ತಾಯಿ-ಮಗ ಹೊರಟಿದ್ದ ಬೈಕ್ ಗೆ ಡಿಕ್ಕಿಯಾಗಿದೆ. ಪರಿಣಾಮ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸದ್ಯ ತಾಯಿ ಉಮಾ ಹಾಗೂ ಮಗ ಶ್ರೇಯಸ್ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದಲ್ಲಿ ಶನಿವಾರ ದಂತ ವೈದ್ಯರ ಕ್ರಿಕೆಟ್ ಪಂದ್ಯಾವಳಿ ನಡೆದಿತ್ತು. ಪಂದ್ಯಾವಳಿಯಲ್ಲಿ ರಾಜ್ಯಾದ್ಯಂತ 18 ದಂತ ವೈದ್ಯರ ತಂಡಗಳು ಭಾಗಿಯಾಗಿದ್ದವು. ಪಂದ್ಯಾವಳಿ ನಂತರ ವೈದ್ಯರೆಲ್ಲ ಸೇರಿ ಪಾರ್ಟಿ ಮಾಡಿದ್ದಾರೆ. ಹೀಗಾಗಿ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ತೆರಳುತ್ತಿದ್ದಾಗ ವೈದ್ಯರಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.