ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ 12 ಮಂದಿಯನ್ನು ಬಲಿಪಡೆದುಕೊಂಡ ಕಾರು ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು, ಈ ಕೃತ್ಯದ ಹಿಂದೆ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ವೈದ್ಯಕೀಯ ವೃತ್ತಿಪರರ ಜಾಲವನ್ನು ಪತ್ತೆಹಚ್ಚಿದ್ದಾರೆ.

ತನಿಖೆಯ ಕೇಂದ್ರಬಿಂದುವಾಗಿರುವ ಡಾ.ಉಮರ್ ನಬಿ, ಸ್ಫೋಟಕ್ಕೆ ಬಳಸಲಾಗಿದ್ದ ಹುಂಡೈ ಐ20 ಕಾರನ್ನು ಸ್ಫೋಟಕ್ಕೆ ಕೇವಲ 11 ದಿನಗಳ ಮೊದಲು ಖರೀದಿಸಿದ್ದ ಎಂದು ತಿಳಿದುಬಂದಿದೆ. ಸೋಮವಾರ ಸಂಜೆ ಕೆಂಪು ಕೋಟೆ ಬಳಿ ಈ ಬಿಳಿ ಬಣ್ಣದ ಹ್ಯುಂಡೈ ಐ20 ಕಾರು ಸ್ಫೋಟಗೊಂಡಿತ್ತು.
ಮೂಲಗಳ ಪ್ರಕಾರ, ಈ ಕಾರನ್ನು ಅಕ್ಟೋಬರ್ 29ರಂದು ಖರೀದಿಸಲಾಗಿದ್ದು, ತಕ್ಷಣವೇ ಮಾಲಿನ್ಯ ಪ್ರಮಾಣಪತ್ರವನ್ನು ಪಡೆದು ಫರೀದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ ನಿಲ್ಲಿಸಲಾಗಿತ್ತು. ಅಕ್ಟೋಬರ್ 29 ರಿಂದ ನವೆಂಬರ್ 10ರವರೆಗೆ ಕಾರು ಅಲ್ಲೇ ಇತ್ತು. ನವೆಂಬರ್ 10ರ ಬೆಳಿಗ್ಗೆ, ಗಾಬರಿಗೊಂಡಂತೆ ಕಾಣುತ್ತಿದ್ದ ಡಾ. ಉಮರ್, ಕಾರನ್ನು ದೆಹಲಿಯ ಕಡೆಗೆ ಚಲಾಯಿಸಿಕೊಂಡು ಹೋಗಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟಕ್ಕೆ ಮುನ್ನ ಈ ವಾಹನವು ಹಲವು ಬಾರಿ ಕೈಬದಲಾಗಿದ್ದು, ಕೊನೆಯದಾಗಿ ಪುಲ್ವಾಮಾದ ತಾರಿಕ್ ಎಂಬ ವ್ಯಕ್ತಿಗೆ ಮಾರಾಟ ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈ ಖರೀದಿ ಮತ್ತು ಮರುಮಾರಾಟದ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಬಳಸಲಾಗಿದ್ದು, ಇದು ಪ್ರಕರಣಕ್ಕೆ ಪುಲ್ವಾಮ ನಂಟನ್ನು ಸೇರಿಸಿದೆ.
ಡಾ. ಉಮರ್, ಡಾ. ಮುಜಮ್ಮಿಲ್ ಅಹ್ಮದ್ ಘನಿ ಮತ್ತು ಡಾ. ಶಾಹೀನ್ ಶಾಹಿದ್ ಅವರನ್ನೊಳಗೊಂಡ 9ರಿಂದ ಹತ್ತು ಸದಸ್ಯರ ಭಯೋತ್ಪಾದಕ ಲಾಜಿಸ್ಟಿಕ್ಸ್ ಮಾಡ್ಯೂಲ್‌ನಲ್ಲಿ ಐದರಿಂದ ಆರು ವೈದ್ಯರೇ ಇದ್ದರು ಎಂದು ಮೂಲಗಳು ಬಹಿರಂಗಪಡಿಸಿವೆ. ಈ ಮೂವರು ತಮ್ಮ ವೃತ್ತಿಪರತೆಯನ್ನು ದುರ್ಬಳಕೆ ಮಾಡಿಕೊಂಡು, ಕಚ್ಚಾ ಸಾಮಗ್ರಿಗಳನ್ನು ಸಂಗ್ರಹಿಸಿ, ಸ್ಫೋಟಕಗಳನ್ನು ಜೋಡಿಸಿ, ಜೈಷ್-ಎ-ಮೊಹಮ್ಮದ್‌ಗೆ ಲಾಜಿಸ್ಟಿಕ್ಸ್ ಸಂಘಟಿಸಲು ಸಹಾಯ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.
ನವೆಂಬರ್ 9 ರಂದು ನಡೆದ ದಾಳಿಯಲ್ಲಿ 2,900 ಕೆಜಿ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಂಡ ಮಾರನೇ ದಿನವೇ ಡಾ.ಉಮರ್ ತಲೆಮರೆಸಿಕೊಂಡಿದ್ದ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ. ಆತ ತನ್ನ ಐದು ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದು, ಅಕ್ಟೋಬರ್ 30 ರಿಂದ ವಿಶ್ವವಿದ್ಯಾಲಯದ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಆತ ಧೌಜ್ ಗ್ರಾಮದ ಬಳಿ ಅಡಗಿಕೊಂಡಿದ್ದಿರಬಹುದೆಂದು ಶಂಕಿಸಲಾಗಿದೆ.
ತನಿಖೆಯು ಈಗ ಮತ್ತಷ್ಟು ವಿಸ್ತಾರಗೊಂಡಿದೆ. ಶೋಪಿಯಾನ್ ಪೊಲೀಸರು ಜಮಾತ್-ಎ-ಇಸ್ಲಾಮಿ (ಜೆಇಐ) ಕಾರ್ಯಕರ್ತರಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ವೈದ್ಯರ ತಂಡವನ್ನು ಮೂಲಭೂತವಾದದತ್ತ ಸೆಳೆದಿದ್ದ ‘ಮೌಲ್ವಿ ಇರ್ಫಾನ್’ ಎಂಬಾತನ ಬಂಧನದ ನಂತರ ಈ ದಾಳಿಗಳು ನಡೆದಿವೆ. ಇದಲ್ಲದೆ, ಕುಲ್ಗಾಮ್‌ನ ಡಾ. ತಾಜಮುಲ್ ಅಹ್ಮದ್ ಮಲಿಕ್ ಎಂಬ ಮತ್ತೊಬ್ಬ ವೈದ್ಯನನ್ನು ಸಹ ಪೊಲೀಸರು ಕರಣ್ ನಗರದಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಲ್ಲಿ, ಫರೀದಾಬಾದ್‌ನಲ್ಲಿ ಬಂಧಿತಳಾದ ಮಾಜಿ ವೈದ್ಯಕೀಯ ಕಾಲೇಜು ಉಪನ್ಯಾಸಕಿ ಡಾ. ಶಾಹೀನ್ ಶಾಹಿದ್, ಈ ಜಾಲದ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾಳೆ. ಆಕೆಗೆ ಭಾರತದಲ್ಲಿ ‘ಜಮಾತ್-ಉಲ್-ಮೊಮಿನೀನ್’ ಎಂಬ ಹೆಸರಿನಲ್ಲಿ ಜೈಷ್-ಎ-ಮೊಹಮ್ಮದ್‌ನ ಮಹಿಳಾ ಘಟಕವನ್ನು ಸ್ಥಾಪಿಸಿ ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಡಾ. ಶಾಹೀನ್ ಬಂಧನದ ನಂತರ, ಉತ್ತರ ಪ್ರದೇಶ ಎಟಿಎಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳ ಜಂಟಿ ತಂಡವು ಲಕ್ನೋದ ಲಾಲ್‌ಬಾಗ್‌ನಲ್ಲಿರುವ ಆಕೆಯ ನಿವಾಸದ ಮೇಲೆ ದಾಳಿ ನಡೆಸಿತ್ತು. ಆಕೆಯ ಸಹೋದರ, ವೈದ್ಯನೂ ಆಗಿರುವ ಡಾ. ಪರ್ವೇಜ್ ಅನ್ಸಾರಿಯನ್ನು ವಶಕ್ಕೆ ಪಡೆದು, ಫೋನ್‌ಗಳು, ಹಾರ್ಡ್ ಡಿಸ್ಕ್‌ಗಳು ಮತ್ತು ಹಲವಾರು ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.
ಈ ಮಧ್ಯೆ, ಉತ್ತರ ಪ್ರದೇಶದಾದ್ಯಂತ ಭದ್ರತಾ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿದ್ದು, ಎಟಿಎಸ್, ಜಮ್ಮು ಕಾಶ್ಮೀರ ಪೊಲೀಸ್ ಮತ್ತು ಗುಪ್ತಚರ ಘಟಕಗಳು ಸಹರಾನ್‌ಪುರದಿಂದ ನೇಪಾಳ ಗಡಿಯವರೆಗೆ ತೀವ್ರ ನಿಗಾ ವಹಿಸಿವೆ. ಉಳಿದಿರುವ ಜಾಲದ ಸದಸ್ಯರು ಪರಾರಿಯಾಗುವುದನ್ನು ತಡೆಯಲು ಕಟ್ಟುನಿಟ್ಟಿನ ತಪಾಸಣೆ, ದಾಳಿಗಳು ಮತ್ತು ವಿಚಾರಣೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಯಮಹಾ ಏರಾಕ್ಸ್ ಎಲೆಕ್ಟ್ರಿಕ್ ಅನಾವರಣ : 106 ಕಿ.ಮೀ. ರೇಂಜ್, ಸ್ಪೋರ್ಟಿ ವಿನ್ಯಾಸದೊಂದಿಗೆ ಭಾರತದ ಮಾರುಕಟ್ಟೆಗೆ ಲಗ್ಗೆ!


















