ಕುಂದಾಪುರ: ಸಂವಿಧಾನಾತ್ಮಕ, ಜಾತ್ಯಾತೀತ ಮತ್ತು ಮಾನವೀಯ ಮೌಲ್ಯಗಳು ಮೊದಲು ಮೈಗೂಡಿಸಿಗೊಳ್ಳಬೇಕು. ಹಾಗಿದ್ದರೆ ಸಮಾಜವನ್ನು ಅರ್ಥ ಮಾಡಿಕೊಂಡು ಗೌರವದಿಂದ ಕಾಣಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಡಾ.ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಗಣನಾಥ ಎಕ್ಕಾರು ಅಭಿಪ್ರಾಯ ಪಟ್ಟರು.
ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.
ಬಹು ವರ್ಷಗಳ ತಲೆಮಾರುಗಳಿಂದ ಈ ನೆಲದಲ್ಲಿ ಬಹುತ್ವದಲ್ಲಿ ಏಕತೆಯನ್ನು ನಾವುಗಳು ಕಾಣುತ್ತಾ ಬಂದಿದ್ದೇವೆ. ಅದನ್ನು ನಾವು ಪ್ರತಿಪಾದಿಸಬೇಕು. ಸಾಹಿತ್ಯ ಕೃತಿಗಳಿಂದ ಅದನ್ನು ಪ್ರತಿಪಾದಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ʼಜಾಲ್ಗಿರಿʼ ಕೃತಿ ಸಹ ಸೇರಲ್ಪಡುತ್ತದೆ. ಕೃತಿಯ ವಸ್ತು ವಿಷಯಗಳು ಮುಖ್ಯವಾಗಿ ಮಾನವೀಯ ಸಂವೇದನೆಗಳನ್ನು ಹೇಳುತ್ತದೆ ಎಂದು ಹೇಳಿದರು.
ಸಮಾಜದಲ್ಲಿ ಸಂವಿಧಾನಾತ್ಮಕ ನೀಡಲಾದ ಮಾನವೀಯ ಮೌಲ್ಯಗಳಾದ ಸಮಗ್ರತೆ, ಏಕತೆ, ಭ್ರಾತೃತ್ವವನ್ನು ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಾರ್ಯಗಳು ಪ್ರಮುಖವಾಗಿ ಆಗಬೇಕಿದೆ. ಅದನ್ನು ಮೊದಲು ಅರ್ಥ ಮಾಡಿಕೊಂಡರೆ ಸಾಮರಸ್ಯದ ಬದುಕು ಸಾಧ್ಯ. ಆದರೆ ಅದನ್ನು ಒಡೆಯುವ ಪ್ರಯತ್ನಗಳು ಆಗುತ್ತಿವೆ. ಆದರೂ ಭ್ರಾತೃತ್ವದ ಮೌಲ್ಯಗಳಿಂದ ಕೂಡಿದ ಭಾರತವನ್ನು ಕಟ್ಟುವಂತಾಗಬೇಕು ಎಂದು ಹೇಳಿದರು.
ಸಾಂಸ್ಕೃತಿಕ ಚಿಂತಕ ಕೃತಿಯ ತೀರ್ಪುಗಾರರಲ್ಲಿ ಒಬ್ಬರಾದ ಡಾ.ಬಂಜಗೆರೆ ಜಯಪ್ರಕಾಶ್ ವರ್ಚುವಲ್ ವೇದಿಕೆಯಲ್ಲಿ ಮಾತನಾಡಿ ʼಜಾಲ್ಗಿರಿʼ ಕೃತಿಯು ಸೃಜನಶೀಲ ಸ್ವಭಾವವನ್ನು ಹೊಂದಿದೆ. ಒಂದು ಕಾಲಘಟ್ಟದ ಸಮಾಜದ ಸ್ಥಿತಿಗತಿಯನ್ನು ಹೇಳುವುದರ ಜೊತೆಗೆ ಊರು ಕೇರಿಗಳ ಜನರ ನಾಡಿಮಿಡಿತವನ್ನು ಸಂವೇದನಾಶೀಲ ನೆಲೆಯಲ್ಲಿ ತನ್ನ ಪಾತ್ರಗಳ ಮೂಲಕ ಪೋಷಿಸಿದೆ. ನಿಜವಾದ ಬದುಕಿನ ಸಂಘರ್ಷವನ್ನು ಹೇಳುತ್ತದೆ. ಇಂತಹ ಕೃತಿಗಳಿಗೆ ಇಂತಹ ಪ್ರತಿಷ್ಠಿತ ಪ್ರಶಸ್ತಿ ದೊರೆತಾಗ ಅವುಗಳು ಸಾಮಾಜಿಕವಾಗಿ ಮುನ್ನೆಲೆಯಲ್ಲಿ ನಿಲ್ಲಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಪ್ರಶಸ್ತಿ ವಿಜೇತ ʼಜಾಲ್ಗಿರಿʼ ಕೃತಿಯ ಕರ್ತೃ ತುಂಬಾಡಿ ರಾಮಯ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜಾತಿಯ ಕಾರಣಕ್ಕಾಗಿ ಸಮಾಜದಲ್ಲಿ ಎದುರಿಸುವ ಸವಾಲುಗಳು, ದೃಷ್ಟಿಕೋನ, ಭಿನ್ನವಾದ ಅನುಭವಗಳು ಈ ಬರವಣಿಗೆಗೆ ಕಾರಣವಾಗಿದೆ. ಎಷ್ಟೋ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ವ್ಯಕ್ತಿಗಳು ಅನುಭವಿಸಿದ ನೋವುಗಳು ಬರವಣಿಗೆಗೆ ಕಾರಣವಾಗಿದೆ. ಜಾತಿ ಕಲಹಗಳು ನಡುವೆ ಯುವಜನರ ಭವಿಷ್ಯದ ಬಗ್ಗೆ ಆತಂಕವಾಗುತ್ತದೆ. ಆದರೂ ಒಳ್ಳೆಯ ದಿನಗಳ ನಡುವೆ ಯುವ ಮನಸ್ಸುಗಳು ಬೆಳೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ, ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ ಸದಸ್ಯರಾದ ಪ್ರೊ.ವಸಂತ ಬನ್ನಾಡಿ, ನಿವೃತ್ತ ಪ್ರಾಂಶುಪಾಲ ಪ್ರೊ.ದೋಮ ಚಂದ್ರಶೇಖರ, ಲಲಿತಾ ಕಲಾ ಅಕಾಡೆಮಿ ಸದಸ್ಯರಾದ ಮನು ಚಕ್ರವರ್ತಿ, ವಿರೂಪಾಕ್ಷ ದ್ಯಾಗರಹಳ್ಳಿ ಮತ್ತು ಶಿವಕುಮಾರ್ ಉಪಸ್ಥಿತರಿದ್ದರು.
ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸಂಚಾಲಕಿ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿಯ ಸದಸ್ಯೆ ಜಾನಕಿ ಬ್ರಹ್ಮಾವರ ವಂದಿಸಿದರು. ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.



















