ಬೆಂಗಳೂರು: ಮಹಿಳೆಯರಿಗೆ ಎರಡು ಸಾವಿರ ರೂ. ಕೊಡುವ ಬದಲು ಮೊದಲು ಬಾಣಂತಿಯರ ಸಾವಿನ ಸರಣಿ ನಿಲ್ಲಿಸಿ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರಣಿ ಸಾವುಗಳು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮವಾದಂತಿವೆ. ಆದರೂ ಈ ಸರ್ಕಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸುತ್ತಿಲ್ಲವೇ ಎಂದು ಕಿಡಿಕಾರಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳುಗಳಲ್ಲಿ 11 ಜನ ಬಾಣಂತಿಯರು ಸಾವನ್ನಪ್ಪಿದ್ದಾರೆ. ಔಷಧ ನಿಯಂತ್ರಣದಲ್ಲಿ ಗೋಲ್ಮಾಲ್ ಆಗುತ್ತಿರುವುದನ್ನು ತಪ್ಪಿಸಿ, ರಾಜ್ಯದಲ್ಲಿ ಬಾಣಂತಿಯರಿಗೆ ಬದುಕುವ ಗ್ಯಾರಂಟಿ ನೀಡಲಿ ಎಂದು ಹೇಳಿದ್ದಾರೆ.
‘ಬಾಣಂತಿಯರ ಸಾವಿಗೆ ಸಂಬಂಧಿಸಿದ ನ್ಯಾಯಾಂಗ ತನಿಖೆ ಬಗ್ಗೆಯಾಗಲಿ, ಡೆತ್ ಆಡಿಟ್ ಬಗ್ಗೆಯಾಗಲಿ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಕಳಪೆ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡುವುದಾಗಿ ಆರೋಗ್ಯ ಸಚಿವರು ಹೇಳಿದ್ದರು. ಆದರೆ ಇನ್ನೂ ಯಾಕೆ ಹೋಗಿ ದೂರು ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.