ನವದೆಹಲಿ: ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಬಿವೈಡಿ (BYD) ಕಂಪನಿಯು ಹೊಸ ವರ್ಷಕ್ಕೆ ಬೆಲೆ ಏರಿಕೆಯ ಶಾಕ್ ನೀಡಲು ಸಜ್ಜಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಎಲೆಕ್ಟ್ರಿಕ್ ಎಸ್‌ಯುವಿ ಪ್ರಿಯರ ಗಮನ ಸೆಳೆದಿರುವ ಬಿವೈಡಿ ಸೀಲಯನ್ 7, ಜನವರಿ 2026 ರಿಂದ ದುಬಾರಿಯಾಗಲಿದೆ.
ಗ್ರಾಹಕರಿಗೆ ಕೊಂಚ ಸಮಾಧಾನ ನೀಡುವ ವಿಷಯವೆಂದರೆ, ಈ ವರ್ಷದ ಅಂತ್ಯದೊಳಗೆ, ಅಂದರೆ ಡಿಸೆಂಬರ್ 31ರೊಳಗೆ ಬುಕಿಂಗ್ ಮಾಡುವವರಿಗೆ ಹಳೆಯ ಬೆಲೆಯಲ್ಲೇ ಈ ಕಾರು ಲಭ್ಯವಾಗಲಿದೆ. ₹50 ಲಕ್ಷದ ಆಸುಪಾಸಿನಲ್ಲಿ ಐಷಾರಾಮಿ ಮತ್ತು ಅತ್ಯಧಿಕ ಪರ್ಫಾರ್ಮೆನ್ಸ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಸುವ ಆಲೋಚನೆಯಲ್ಲಿರುವವರಿಗೆ ಇದು ಸೂಕ್ತ ಸಮಯವಾಗಿದೆ.
ಜನವರಿ 1 ರಿಂದ ಹೊಸ ದರ ಜಾರಿ
ಚೀನಾ ಮೂಲದ ಇವಿ ದಿಗ್ಗಜ ಬಿವೈಡಿ ಇಂಡಿಯಾ ಅಧಿಕೃತವಾಗಿ ಪ್ರಕಟಿಸಿರುವಂತೆ, ಜನವರಿ 1, 2026 ರಿಂದ ಸೀಲಯನ್ 7 ಎಸ್‌ಯುವಿಯ ಬೆಲೆಯನ್ನು ಪರಿಷ್ಕರಿಸಲಾಗುವುದು. ಆದರೆ ನಿಖರವಾದ ಬೆಲೆ ಏರಿಕೆ ಎಷ್ಟು ಎಂಬ ಗುಟ್ಟನ್ನು ಕಂಪನಿ ಇನ್ನೂ ಬಿಟ್ಟುಕೊಟ್ಟಿಲ್ಲ. ಸದ್ಯ ಮಾರುಕಟ್ಟೆಯಲ್ಲಿ ಸೀಲಯನ್ 7 ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಇದರ ಪ್ರೀಮಿಯಂ ಆವೃತ್ತಿಯು 48.90 ಲಕ್ಷ ರೂಪಾಯಿ ಮಾರಾಟವಾಗುತ್ತಿದ್ದರೆ, ಪರ್ಫಾರ್ಮೆನ್ಸ್ ಆವೃತ್ತಿಯ ಎಕ್ಸ್-ಶೋರೂಂ ಬೆಲೆ 54.90 ಲಕ್ಷ ರೂಪಾಯಿ. ಈ ಬೆಲೆಗಳು ಡಿಸೆಂಬರ್ 31 ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತವೆ.
ಗ್ರಾಹಕರನ್ನು ಸೆಳೆಯುತ್ತಿರುವ ವಿಶೇಷತೆಗಳು
ಸೀಲಯನ್ 7 ಮಾದರಿಯು ಭಾರತೀಯ ಗ್ರಾಹಕರನ್ನು ಆಕರ್ಷಿಸಲು ಪ್ರಮುಖ ಕಾರಣ ಅದರ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರ್ಫಾರ್ಮೆನ್ಸ್. ಇದು ಬಿವೈಡಿಯ ಪ್ರಖ್ಯಾತ ‘ಬ್ಲೇಡ್ ಬ್ಯಾಟರಿ’ ತಂತ್ರಜ್ಞಾನವನ್ನು ಹೊಂದಿದ್ದು, 82.56 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಇದರಲ್ಲಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಪ್ರೀಮಿಯಂ ಆವೃತ್ತಿಯು 567 ಕಿಲೋಮೀಟರ್‌ಗಳವರೆಗೆ ಮತ್ತು ಪರ್ಫಾರ್ಮೆನ್ಸ್ ಆವೃತ್ತಿಯು 542 ಕಿಲೋಮೀಟರ್‌ಗಳವರೆಗೆ ಚಲಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.
ವೇಗದ ವಿಷಯದಲ್ಲೂ ಈ ಕಾರು ಹಿಂದೆ ಬಿದ್ದಿಲ್ಲ. ಇದರ ಪರ್ಫಾರ್ಮೆನ್ಸ್ ಆವೃತ್ತಿಯು ಕೇವಲ 4.5 ಸೆಕೆಂಡುಗಳಲ್ಲಿ 0 ದಿಂದ 100 ಕಿಲೋಮೀಟರ್ ವೇಗವನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಪ್ರೀಮಿಯಂ ಆವೃತ್ತಿಯು ಇದೇ ವೇಗವನ್ನು ತಲುಪಲು 6.7 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಇದು 5-ಸ್ಟಾರ್ ಎನ್‌ಸಿಎಪಿ ರೇಟಿಂಗ್ ಪಡೆದುಕೊಂಡಿದೆ.
ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ
ಭಾರತದಲ್ಲಿ ಬಿಡುಗಡೆಯಾದ ಅಲ್ಪಾವಧಿಯಲ್ಲೇ ಸೀಲಯನ್ 7 ಮಾದರಿಯ 2,000ಕ್ಕೂ ಹೆಚ್ಚು ಯುನಿಟ್‌ಗಳು ಮಾರಾಟವಾಗಿವೆ ಎಂದು ಬಿವೈಡಿ ಇಂಡಿಯಾದ ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ವಿಭಾಗದ ಮುಖ್ಯಸ್ಥ ರಾಜೀವ್ ಚೌಹಾಣ್ ತಿಳಿಸಿದ್ದಾರೆ. ಬೆಲೆ ಏರಿಕೆಗೂ ಮುನ್ನ ಗ್ರಾಹಕರಿಗೆ ಅವಕಾಶ ಮಾಡಿಕೊಡಲು ಡಿಸೆಂಬರ್ ಅಂತ್ಯದವರೆಗೆ ಹಳೆಯ ದರವನ್ನು ಕಾಯ್ದುಕೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬೆಲೆ ಏರಿಕೆಯ ನಂತರವೂ ಸೀಲಯನ್ 7 ತನ್ನ ಬೇಡಿಕೆಯನ್ನು ಉಳಿಸಿಕೊಳ್ಳಲಿದೆಯೇ ಅಥವಾ ಗ್ರಾಹಕರು ಬೇರೆ ಆಯ್ಕೆಗಳತ್ತ ಮುಖಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಸದ್ಯಕ್ಕೆ, ಹೊಸ ಕಾರು ಖರೀದಿಸುವವರಿಗೆ ಬೆಲೆ ಏರಿಕೆಯ ಹೊರೆಯಿಂದ ಪಾರಾಗಲು ಡಿಸೆಂಬರ್ 31 ಡೆಡ್‌ಲೈನ್ ಆಗಿದೆ.
ಇದನ್ನೂ ಓದಿ: ನೀವು ಕಾರು ಖರೀದಿಸಿದ ಬಳಿಕ ಸಿಗಲಿದೆ 30 ಸಾವಿರ ರೂ. ರಿಫಂಡ್ : ಹೇಗೆ ಅಂತೀರಾ?



















