ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ, ಶಿವಸೇನೆ ಶಿಂಧೆ ಬಣದ ಮುಖ್ಯಸ್ಥ ಏಕನಾಥ ಶಿಂಧೆ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಬಿರುಕು ಹೆಚ್ಚುತ್ತಿದೆ ಎಂಬ ಊಹಾಪೋಹಗಳ ನಡುವೆಯೇ, ಶಿಂಧೆ ಅವರು “ನನ್ನನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ” ಎಂದು ಎಚ್ಚರಿಕೆ ನೀಡಿದ್ದಾರೆ. ಅವರ ಈ ಮಾತುಗಳು ಮಹಾ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮತ್ತೊಮ್ಮೆ ಪುಷ್ಟಿ ನೀಡಿದೆ.
ಇತ್ತೀಚೆಗೆ ಫಡ್ನವೀಸ್ ಕರೆದಿದ್ದ ಹಲವು ಸಭೆಗಳಿಗೆ ಗೈರಾಗುವ ಮೂಲಕ, ಫಡ್ನವೀಸ್ ಜೊತೆಗೆ ವೇದಿಕೆ ಹಂಚಿಕೊಳ್ಳದೇ ಇರುವ ಮೂಲಕ ಶಿಂಧೆ ಅವರು ಪರೋಕ್ಷವಾಗಿ ಫಡ್ನವೀಸ್ ವಿರುದ್ಧದ ಅಸಮಾಧಾನವನ್ನು ಹೊರಹಾಕಿದ್ದರು. ಈಗ ತಮ್ಮನ್ನು ಹಗುರವಾಗಿ ಪರಿಗಣಿಸದಿರಿ ಎಂದಿರುವ ಅವರು, 2022ರಲ್ಲಿ ತಮ್ಮನ್ನು ಲಘುವಾಗಿ ಪರಿಗಣಿಸಿದ ಕಾರಣಕ್ಕಾಗಿಯೇ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಳ್ಳಬೇಕಾಯಿತು ಎಂಬುದನ್ನು ಉಲ್ಲೇಖಿಸಿ ತಮ್ಮ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಶಿಂಧೆ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಲ್ನಾದಲ್ಲಿ 900 ಕೋಟಿ ರೂ. ವೆಚ್ಚದ ಯೋಜನೆಯೊಂದಕ್ಕೆ ಅನುಮತಿ ನೀಡಿದ್ದರು. ಈಗ ಈ ಯೋಜನೆಯನ್ನು ಸ್ಥಗಿತಗೊಳಿಸಿರುವ ಸಿಎಂ ಫಡ್ನವೀಸ್ ಅವರು, ಈ ಯೋಜನೆಗೆ ಅನುಮತಿ ನೀಡಿರುವ ಶಿಂಧೆಯವರ ಉದ್ದೇಶ ಮತ್ತು ಇತರೆ ವಿಚಾರಗಳಿಗೆ ಸಂಬಂಧಿಸಿ ತನಿಖೆಗೂ ಆದೇಶಿಸಿದ್ದಾರೆ. ಇದರ ಬೆನ್ನಲ್ಲೇ ಶಿಂಧೆಯವರು ಕೆಂಡವಾಗಿದ್ದು, ಸಿಎಂ ಫಡ್ನವೀಸ್ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ ಶಿಂಧೆ, “ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಜೊತೆಗೆ, ಬಾಳಾ ಸಾಹೇಬರ ಕಾರ್ಯಕರ್ತನೂ ಹೌದು. ಇದನ್ನು ಎಲ್ಲರೂ ಅರ್ಥಮಾಡಿಕೊಂಡರೆ ಒಳ್ಳೆಯದು. 2022ರಲ್ಲಿ ನನ್ನನ್ನು ಹಗುರವಾಗಿ ಪರಿಗಣಿಸಿದ್ದಕ್ಕೇ, ನಾನು ಸರ್ಕಾರವನ್ನು ಉರುಳಿಸಬೇಕಾಗಿ ಬಂತು” ಎಂದಿದ್ದಾರೆ. ಈ ಮೂಲಕ ಫಡ್ನವೀಸ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ವಿಧಾನಸಭೆಯಲ್ಲಿ ನಾನು ಮಾಡಿದ ಮೊದಲ ಭಾಷಣದಲ್ಲೇ, ದೇವೇಂದ್ರ ಫಡ್ನವೀಸ್ ಅವರು 200ಕ್ಕೂ ಹೆಚ್ಚು ಸೀಟುಗಳನ್ನು ಗಳಿಸುತ್ತಾರೆ ಎಂದಿದ್ದೆ. ಅದರಂತೆ ನಾವು 232 ಸೀಟುಗಳನ್ನು ಗಳಿಸಿದೆವು. ಅದೇ ಕಾರಣಕ್ಕೆ ಹೇಳುತ್ತಿದ್ದೇನೆ- ನನ್ನನ್ನು ಹಗುರವಾಗಿ ಪರಿಗಣಿಸಬೇಡಿ. ನಾನು ಯಾರನ್ನು ಗುರಿಯಾಗಿಟ್ಟುಕೊಂಡು ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂಬುದು ಅವರಿಗೆ ಗೊತ್ತು. ಅವರಿಗೆ ಅರ್ಥವಾದರೆ ಸಾಕು ಎಂದೂ ಶಿಂಧೆ ಹೇಳಿದ್ದಾರೆ.
2022ರಲ್ಲಿ 40 ಶಾಸಕರೊಂದಿಗೆ ಶಿವಸೇನೆಯಿಂದ ಬಂಡಾಯವೆದ್ದು ಹೊರಬಂದಿದ್ದ ಶಿಂಧೆ ಅವರು ಮಹಾ ವಿಕಾಸ ಅಘಾಡಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಇದರಿಂದಾಗಿ ಶಿವಸೇನೆಯು ಛಿದ್ರವಾಯಿತು. ಅಲ್ಲದೆ, ಶಿಂಧೆಯು ನಂತರ ಬಿಜೆಪಿಯೊಂದಿಗೆ ಕೈಜೋಡಿಸಿ, ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿ, ತಾವೇ ಮುಖ್ಯಮಂತ್ರಿ ಹುದ್ದೆಗೇರಿದ್ದರು.
ಆದರೆ, 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಗೈದ ಹಿನ್ನೆಲೆಯಲ್ಲಿ ಶಿಂಧೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು. 230 ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಿಜೆಪಿ 132 ಸ್ಥಾನಗಳನ್ನು ಗೆದ್ದ ಕಾರಣ, ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಹುದ್ದೆಗೇರಿದರು. ತಮ್ಮಿಂದ ಸಿಎಂ ಹುದ್ದೆಯನ್ನು ಕಸಿದುಕೊಂಡರು ಎಂದು ಶಿಂಧೆಯಲ್ಲಿ ಅಂದು ಎದ್ದ ಅಸಮಾಧಾನದ ಹೊಗೆ ಇನ್ನೂ ಆರಿಲ್ಲ. ಪ್ರಸ್ತುತ ಶಿಂಧೆ ಸೇನೆಯು ಮಹಾರಾಷ್ಟ್ರ ವಿಧಾನಸಭೆಯಲ್ಲಿ 57 ಶಾಸಕರನ್ನು ಹೊಂದಿದ್ದರೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ 41 ಶಾಸಕರ ಬಲ ಹೊಂದಿದೆ.