ಭಾರತಕ್ಕೆ ಯಾವುದರಲ್ಲಿಯೂ ಸರಿಸಮಾನವಲ್ಲದ ಪಾಕ್, ಬಾಯಿ ಮಾತಲ್ಲಿ ಆಗಾಗ ಹೆದರಿಸಲು ಬಂದು, ಪೇಚಿಗೆ, ಅವಮಾನಕ್ಕೆ ಸಿಲುಕಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಸರಿ.! ಆದರೂ ಅದು ತನ್ನ ಬಾಯಿಗೆ ಬೀಗ ಹಾಕಿಕೊಳ್ಳುವ ಕಾರ್ಯ ಮಾಡುತ್ತಿಲ್ಲ. ಮತ್ತೊಮ್ಮೆ ಅಟಂ ಬಾಂಬ್ ಎನ್ನುತ್ತಿದೆ. ಹಾಗಾದರೆ, ಪಾಕ್ ಗೆ ನಿಜವಾಗಿಯೂ ಭಾರತದಂತಹ ಬಲಿಷ್ಠ ರಾಷ್ಟ್ರವನ್ನು ಹೆದರಿಸುವಷ್ಟು ತಾಕತ್ತು ಇದೆಯೇ?
ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಎರಡೂ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು. 1988ರ ಡಿಸೆಂಬರ್ 1ರಂದು ಎರಡೂ ದೇಶಗಳು ಪರಮಾಣು ಸ್ಥಾಪನಾ ಪಟ್ಟಿಯನ್ನು ಪರಸ್ಪರ ಹಂಚಿಕೊಳ್ಳುವ ಕುರಿತು ಒಪ್ಪಂದಕ್ಕೆ ಸಹಿ ಹಾಕಿವೆ. ಇಲ್ಲಿ ನೀಡಿರುವ ಪಟ್ಟಿಯಲ್ಲಿ ಪರಮಾಣು ಸ್ಥಾಪನೆ ಅಥವಾ ಸೌಲಭ್ಯ, ಪರಮಾಣು ಸಂಶೋಧನಾ ರಿಯಾಕ್ಟರ್‌ಗಳು, ಇಂಧನ ತಯಾರಿಕೆ, ಯುರೇನಿಯಂ ಬಳಕೆ, ಐಸೊಟೋಪ್‌ಗಳ ಪ್ರತ್ಯೇಕತೆ ಮತ್ತು ಮರುಸಂಸ್ಕರಣಾ ಸೌಲಭ್ಯಗಳು, ಪರಮಾಣು ವಿಕಿರಣಶೀಲ ವಸ್ತುಗಳನ್ನು ಹೊಂದಿರುವ ಸಂಸ್ಥೆಗಳ ಬಗೆಗಿನ ವಿವರ ಪಟ್ಟಿಯನ್ನು ಅಂದು ಎರಡೂ ರಾಷ್ಟ್ರಗಳು ಹಂಚಿಕೊಂಡಿದ್ದವು.
ಯುದ್ಧದ ಸಂದರ್ಭದಲ್ಲಿ ವಿವೇಚನಾ ರಹಿತ ಅಣ್ವಸ್ತ್ರಗಳ ಬಳಕೆ ತಪ್ಪಿಸುವುದಕ್ಕಾಗಿ ಈ ರೀತಿ ಪಾಲಿಸುವುದು ಒಪ್ಪಂದದ ಒಂದು ಕ್ರಮವಾಗಿದೆ. ಅದೇ ರೀತಿ ಅಲ್ಲಿ ಪಟ್ಟಿ ನೀಡಲಾಯಿತು. ಹಾಗಾದರೆ ಈಗ ವಿಷಯಕ್ಕೆ ಬರೋಣ…2023ರಲ್ಲಿ ಸ್ಟಾಕ್‌ಹೋಮ್ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್‌ಟಿಟ್ಯೂಟ್ ವರದಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯಂತೆ ಭಾರತ 164 ಅಣ್ವಸ್ತ್ರ ಹೊಂದಿದ್ದರೆ, ಪಾಕ್ 170 ಅಣ್ವಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿದೆ.
1998ರ ಮೇ 28ರಂದು ಪಾಕಿಸ್ತಾನ ತನ್ನ ಮೊದಲ ಪರಮಾಣು ಪರೀಕ್ಷೆ ನಡೆಸಿತ್ತು. 1998ರ ಮೇ 11ರಂದು ಭಾರತವು ತನ್ನ 2ನೇ ಪರಮಾಣು ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್‌ನಲ್ಲಿ ನಡೆಸಿತ್ತು. ಭಾರತ 1999ರಲ್ಲಿ ತನ್ನ ಪರಮಾಣು ನೀತಿ ಹೊರಡಿಸಿ, ”ನಾವಾಗಿಯೇ ಮೊದಲು ಅಣ್ವಸ್ತ್ರ ಬಳಸುವುದಿಲ್ಲ ಎಂದು ಘೋಷಿಸಿತ್ತು. ಅದರಂತೆ ಶತೃ ರಾಷ್ಟ್ರಗಳೊಂದಿಗೆ ಭಾರತ ಈ ತತ್ವದೊಂದಿಗೆ ನಡೆದುಕೊಳ್ಳುತ್ತಿದೆ. ಆದರೆ, ಇನ್ನೊಂದು ರಾಷ್ಟ್ರ ನಮ್ಮ ಮೇಲೇನಾದರೂ ಪರಮಾಣು ಬಾಂಬ್ ದಾಳಿಗೆ ಮುಂದಾದರೆ, ಆ ಸಂದರ್ಭದಲ್ಲಿ ಭಾರತ ಸುಮ್ಮನಿರುವುದಿಲ್ಲ ಎನ್ನುವುದು ಕೂಡ ಭಾರತದ ಎಚ್ಚರಿಕೆಯಾಗಿದೆ. ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ನಂತರವಂತೂ ವಿರೋಧಿಗಳಿಗೆ ಈ ಮಾತು ಕಿವಿಯಲ್ಲಿ ಮಾರ್ದನಿಸುತ್ತಿರುತ್ತದೆ. ಹೀಗಾಗಿ ಗಡಿ ಭಾಗದಲ್ಲಿ ಕದನ ವಿರಾಮಗಳು ಕಡಿಮೆಯಾಗಿರುವುದು.
ಆದರೆ, ಪಾಕ್ ಯಾವುದೇ ಸಂದರ್ಭದಲ್ಲಿಯೂ ಪರಮಾಣು ದಾಳಿ ನಡೆಸುವ ದುಸ್ಸಾಹಸಕ್ಕೆ ಕೈ ಹಾಕಬಹುದು ಎಂಬ ಗುಮಾನಿ ಆಗಿನಿಂದಲೂ ಇದ್ದೇ ಇದೆ. ಹಿಂದೆ 2 ಬಾರಿ ಅಣ್ವಸ್ತ್ರ ದಾಳಿಗೆ ಈ ದುಷ್ಟ ಪಾಕ್ ಮುಂದಾಗಿತ್ತು.
1999ರಲ್ಲಿ ಸುಮಾರು 2 ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಭಾರತದ ಎದುರು ಹೀನಾಯ ಸೋಲು ಕಂಡಿತ್ತು. ಈ ಯುದ್ಧದ ಸೇಡು ತೀರಿಸಿಕೊಳ್ಳುವುದಕ್ಕಾಗಿ ಪಾಕ್ 2002ರಲ್ಲಿಗಡಿಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸಲು ಮುಂದಾಗಿತ್ತು. ಅಮೆರಿಕದ ಗುಪ್ತಚರ ಸಂಸ್ಥೆ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ವಿಶ್ಲೇಷಕ ಬ್ರೂಸ್ ರಿಡಲ್ ಈ ಕುರಿತು ಸಾಕ್ಷಿ ಸಮೇತ ವಿಷಯ ಬಹಿರಂಗಗೊಳಿಸಿತ್ತು. ನಾಸಾ ಸೆರೆಹಿಡಿದ ಉಪಗ್ರಹದ ಚಿತ್ರಗಳೂ ಇದಕ್ಕೆ ಪುಷ್ಟಿ ನೀಡಿದ್ದವು.
ಉಗ್ರರು ಪುಲ್ವಾಮಾದಲ್ಲಿ ದಾಳಿ ನಡೆಸಿ 40 ಜನ ಸೈನಿಕರನ್ನು ಬಲಿ ಪಡೆದಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ 2019ರಲ್ಲಿ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಡೆಸಿ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿತ್ತು. ಉಗ್ರರ ಶಿಬಿರಗಳ ಧ್ವಂಸ ಮಾಡಿತ್ತು. ಇದರಿಂದ ಮುಜುಗರ ಅನುಭವಿಸಿದ್ದ ಪಾಕ್, ಬಾರತದ ಮೇಲೆ ಅಣ್ವಸ್ತ್ರ ದಾಳಿಗೆ ಮುಂದಾಗಿತ್ತು ಎಂಬ ಸಂಗತಿ ಎಂಬುವುದು ಜಗಜ್ಜಾಹೀರಾಗಿತ್ತು.
1960ರಲ್ಲಿ ಪಾಕಿಸ್ತಾನಿಯರ ತಲಾ ಆದಾಯ ಭಾರತೀಯರ ಆದಾಯಕ್ಕಿಂತ ಹೆಚ್ಚಿತ್ತು. ಆದರೆ, ಉಗ್ರರನ್ನು ಸಾಕಿಕೊಳ್ಳಲು ಆರಂಭಿಸಿದಾಗಿನಿಂದ ಅದರ ಆರ್ಥಿಕತೆ ಅಧೋಗತಿಗೆ ಸರಿಯಲು ಆರಂಭಿಸಿತು. ಈಗ ಅದಕ್ಕೆ ಆರ್ಥಿಕತೆ ಸುಧಾರಿಸುವುದು, ಜನರ ಬದುಕು ನೆಮ್ಮದಿಯಿಂದ ಇರುವುದು ಬೇಕಿಲ್ಲ. ಆಟಂ ಬಾಂಬ್ ಗಳ ಸಂಗ್ರಹ ಹೆಚ್ಚಾಗಬೇಕಿದೆ.
ಹೀಗಾಗಿಯೇ ಪಾಕಿಸ್ತಾನ ಪರಮಾಣು ಬಾಂಬ್‌ಗಳನ್ನು ತಯಾರಿಸುವಲ್ಲಿ ಮುಂದಿದೆ. ಈ ನಿಟ್ಟಿನಲ್ಲಿಯೇ ಅದು ಆರ್ಥಿಕವಾಗಿ ದಿವಾಳಿಯಾಗುವ ಆತಂಕ ಎದುರಿಸುತ್ತಿದೆ. ಹಸಿವು, ಬಡತನ, ನಿರುದ್ಯೋಗ ಸಮಸ್ಯೆಗಳಿಗೆ ಉತ್ತರ ಹುಡುಕುವಲ್ಲಿ ಭಾರೀ ಮಟ್ಟದಲ್ಲಿ ಸೋತು ಹೋಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಇದೇ ಉದ್ವಿಗ್ನತೆ ಮುಂದುವರಿದರೆ, 2025ರ ವೇಳೆಗೆ ಪಾಕ್‌ನ ಅಣ್ವಸ್ತ್ರಗಳ ಸಂಖ್ಯೆ 200 ದಾಟಲಿದೆ. ಒಂದು ವೇಳೆ ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧ ಸಂಭವಿಸಿದರೆ, 16ರಿಂದ 36 ಟನ್‌ಗಳಷ್ಟು ಕಪ್ಪು ಕಾರ್ಬನ್ ವಾತಾವರಣದಲ್ಲಿ ಕರಗುತ್ತದೆ. ಇದರಿಂದಾಗಿ ಸೂರ್ಯನಿಂದ ಭೂಮಿಯು ಪಡೆಯುವ ಬೆಳಕು ಶೇ.20ರಿಂದ 35ರಷ್ಟು ಕಡಿಮೆಯಾಗುತ್ತದೆ. ಭೂಮಿಯು 2ರಿಂದ 5 ಸೆಲ್ಸಿಯಸ್‌ನಷ್ಟು ತಂಪಾಗುತ್ತದೆ. ಹವಾಮಾನದ ಮೇಲೂ ಪರಿಣಾಮ ಬೀರುತ್ತದೆ. ಮುಂದಿನ ಪೀಳಿಗೆ ಕಪ್ಪು ಛಾಯೆಯಲ್ಲಿ ಬದುಕು ಸವಿಸುವುದಂತೂ ಸತ್ಯ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಚುಕ್ಕಾಣಿ ಹಿಡಿದಾಗಿನಿಂದ ಭಾರತದ ಬತ್ತಳಿಕೆಯಲ್ಲಿ ಅಣ್ವಸ್ತ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ದೇಶದ ಆರ್ಥಿಕತೆಯೂ ಹೆಚ್ಚಾಗುತ್ತಿದೆ. ಹೀಗಾಗಿಯೇ ಶತೃ ರಾಷ್ಟ್ರಗಳಿಗೆ ಭಯ ಶುರುವಾಗುತ್ತಿದೆ.
ಸ್ಟಾಕ್‌ಹೋಮ್ ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ 2020ರಲ್ಲಿ ಪ್ರಕಟಿಸಿದ ವರದಿಯಂತೆ ಒಂದೇ ವರ್ಷದಲ್ಲಿ ಭಾರತದ ಬತ್ತಳಿಕೆಯಲ್ಲಿ 10 ಅಣ್ವಸ್ತ್ರಗಳು ಸೇರ್ಪಡೆಯಾಗಿದ್ದವು. ಜಗತ್ತಿನ ಇತರ ರಾಷ್ಟ್ರಗಳಿಗೆ ಈಗ ಭಾರತ ದೊಡ್ಡ ರಕ್ಷಣಾ ಪರಿಕರಗಳನ್ನು ರಫ್ತು ಮಾಡುವ ರಾಷ್ಟ್ರವಾಗಿದೆ. ರಕ್ಷಣಾ ವ್ಯವಸ್ಥೆಯಲ್ಲಿ ಸಾಕಷ್ಟು ಮುಂದಿರುವ ರಾಷ್ಟ್ರಗಳೂ ಈಗ ಭಾರತದ ಮೇಲೆಯೇ ಅವಲಂಬನೆಯಾಗಿವೆ. ಇದು ಕೂಡ ಮೋದಿ ಮೋಡಿಯೇ ಎಂದು ಜಗತ್ತು ಕೊಂಡಾಡುತ್ತಿದೆ. ಅದಕ್ಕಾಗಿಯೇ ಮೋದಿ ಇತ್ತೀಚೆಗೆ ಪ್ರಚಾರದಲ್ಲಿ ಸಂದರ್ಭದಲ್ಲಿ ಭಾರತ ದೊಡ್ಡ ಅಣ್ವಸ್ತ್ರ ತಯಾರಿ ರಾಷ್ಟ್ರವಷ್ಟೇ ಅಲ್ಲ, ಅದಕ್ಕೆ ಅವುಗಳನ್ನು ಸಿಡಿಸುವುದು ಗೊತ್ತು ಎಂದು ಹೇಳಿ ಶತೃರಾಷ್ಟ್ರಗಳ ಅಹಂಕಾರಕ್ಕೆ ಉತ್ತರ ನೀಡಿದ್ದರು. ಅದಕ್ಕಾಗಿಯೇ ಗಡಿ ಈಗ ಶಾಂತವಾಗಿದೆ ಅಲ್ಲವೇ?