ನವದೆಹಲಿ: ಭಾರತದಲ್ಲಿ ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ ಸೇರಿದಂತೆ ನೇರ ತೆರಿಗೆ ಸಂಗ್ರಹ ಕಳೆದ 10 ವರ್ಷಗಳಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಬಿಡುಗಡೆಯಾಗಿರುವ ಟೈಮ್ ಸೀರೀಸ್ ಡಾಟಾದಲ್ಲಿ ನೇರ ತೆರಿಗೆ ಸಂಗ್ರಹ ಹೆಚ್ಚಳವಾಗಿರುವುದು ಉಲ್ಲೇಖವಾಗಿದೆ. 2014-15ರ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ 6.96 ಲಕ್ಷ ಕೋಟಿ ರೂ.ನಷ್ಟು ನೇರ ತೆರಿಗೆ ಸಂಗ್ರಹವಾಗಿತ್ತು. ಆನಂತರ ಹತ್ತು ವರ್ಷಗಳ ನಂತರ 2023-24ರ ವರ್ಷದಲ್ಲಿ ಸಂಗ್ರಹವಾದ ನೇರ ತೆರಿಗೆಗಳ ಮೊತ್ತ 19.60 ಲಕ್ಷ ಕೋಟಿ ರೂ. ಆಗಿದೆ. ಅಂದರೆ, ಶೇ. 182ರಷ್ಟು ಹೆಚ್ಚಳವಾಗಿದೆ.
ಕಾರ್ಪೊರೇಟ್ ತೆರಿಗೆ ಮತ್ತು ವೈಯಕ್ತಿಕ ಆದಾಯ ತೆರಿಗೆಗಳ ಸಂಗ್ರಹದಲ್ಲೂ ಸಾಕಷ್ಟು ಏರಿಕೆ ಆಗಿದೆ. ಕಾರ್ಪೊರೇಟ್ ಟ್ಯಾಕ್ಸ್ ಕಲೆಕ್ಷನ್ಗಳು ಹತ್ತು ವರ್ಷದಲ್ಲಿ ಎರಡು ಪಟ್ಟು ಬೆಳೆದಿವೆ. 2014-15ರಲ್ಲಿ 4.29 ಲಕ್ಷ ಕೋಟಿ ಇದ್ದ ಕಾರ್ಪೊರೇಟ್ ಟ್ಯಾಕ್ಸ್ ಸಂಗ್ರಹ 2023-24ರಲ್ಲಿ 9.11 ಲಕ್ಷ ಕೋಟಿ ರೂ. ಆಗಿದೆ. ಪರ್ಸನಲ್ ಇನ್ಕಮ್ ಟ್ಯಾಕ್ಸ್ ಸಂಗ್ರಹದಲ್ಲಿ ಕೂಡ ಭಾರೀ ಏರಿಕೆಯಾಗಿದೆ.
ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2014-15ರಲ್ಲಿ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹ 2.66 ಲಕ್ಷ ಕೋಟಿ ರೂ ಇತ್ತು. ಇದು 2023-24ರಲ್ಲಿ ಬರೋಬ್ಬರಿ 10.45 ಲಕ್ಷ ಕೋಟಿ ರೂ. ಆಗಿದೆ. 2014-15ರಲ್ಲಿ 4.04 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು. ಹತ್ತು ವರ್ಷದ ಬಳಿಕ ಐಟಿ ರಿಟರ್ನ್ ಸಲ್ಲಿಸುವವರ ಸಂಖ್ಯೆ 8.61 ಕೋಟಿಯಾಗಿದೆ. ಅಂದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಾಗುವ ಸಂಖ್ಯೆ ಹತ್ತು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ಜಿಡಿಪಿ ಮತ್ತು ನೇರ ತೆರಿಗೆ ನಡುವಿನ ಅನುಪಾತ ಹತ್ತು ವರ್ಷದಲ್ಲಿ ಶೇ. 5.55ರಿಂದ ಶೇ. 6.64ಕ್ಕೆ ಏರಿಕೆ ಆಗಿದೆ. ಅಂದರೆ 2014-15ರ ಹಣಕಾಸು ವರ್ಷದಲ್ಲಿ ಜಿಡಿಪಿಯಲ್ಲಿ ನೇರ ತೆರಿಗೆಯ ಪಾಲು ಶೇ. 5.55ರಷ್ಟಿತ್ತು. 2023-24ರಲ್ಲಿ ಈ ಪಾಲು ಶೇ. 6.64ಕ್ಕೆ ಹೆಚ್ಚಳವಾಗಿರುವುದನ್ನು ಕಾಣಬಹುದು.