ಟೆಹ್ರಾನ್ : ಇರಾನ್ನ ಮಿನಾಬ್ ನಗರದಲ್ಲಿ ಇತ್ತೀಚೆಗೆ ನಡೆದ ಭೀಕರ ಕ್ಷಿಪಣಿ ದಾಳಿಯಲ್ಲಿ 165ಕ್ಕೂ ಹೆಚ್ಚು ಶಾಲಾ ಬಾಲಕಿಯರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಾಗತಿಕ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಹಾಗೂ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯ ವೇಳೆ ‘ಶಜರೇಹ್ ತಯ್ಯೆಬೆಹ್’ ಪ್ರಾಥಮಿಕ ಶಾಲೆಯ ಮೇಲಾದ ದಾಳಿಯಲ್ಲಿ 7 ರಿಂದ 12 ವರ್ಷದ ಮುಗ್ಧ ಬಾಲಕಿಯರು ಹಾಗೂ ಶಿಕ್ಷಕರು ಬಲಿಯಾಗಿದ್ದಾರೆ. ಈ ದುರಂತವು ಇದೀಗ ಯುದ್ಧಭೂಮಿಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯ ಕುರಿತು ಗಂಭೀರ ಆತಂಕವನ್ನು ಹುಟ್ಟುಹಾಕಿದ್ದು, ಎಐ ಎಡವಟ್ಟು ಮಾಡಿ ಮುಗ್ಧರ ಜೀವ ತೆಗೆಯಿತೇ ಎಂಬ ಪ್ರಶ್ನೆ ಎದುರಾಗಿದೆ.
‘ಡಬಲ್-ಟ್ಯಾಪ್’ ಕ್ರೌರ್ಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ದಾಳಿಯ ಹೊಣೆಯನ್ನು ಇರಾನ್ ಮೇಲೆಯೇ ಹೊರಿಸಿದ್ದರೂ, ಕರಾರುವಾಕ್ಕಿಲ್ಲದ ಶಸ್ತ್ರಾಸ್ತ್ರಗಳಿಂದ ಇರಾನ್ ಈ ಪ್ರಮಾದ ಎಸಗಿದೆ ಎಂದು ಹೇಳಿದ್ದರೂ, ಸ್ವತಂತ್ರ ತನಿಖಾ ವರದಿಗಳು ಬೇರೆಯದೇ ಕಥೆ ಹೇಳುತ್ತಿವೆ. ಸಿಎನ್ಎನ್ ಮತ್ತು ಇತರ ತಜ್ಞರ ವಿಶ್ಲೇಷಣೆಯ ಪ್ರಕಾರ, ಈ ದಾಳಿಯಲ್ಲಿ ಬಳಸಲಾಗಿರುವುದು ಅಮೆರಿಕದ ಪಡೆಗಳು ಮಾತ್ರ ಬಳಸುವ ‘ಟೊಮಾಹಾಕ್ ಲ್ಯಾಂಡ್ ಅಟ್ಯಾಕ್ ಮಿಸೈಲ್’. ಇದಲ್ಲದೆ, ಈ ಶಾಲೆಯ ಮೇಲೆ 40 ನಿಮಿಷಗಳ ಅಂತರದಲ್ಲಿ ಸತತ 2 ಬಾರಿ ಬಾಂಬ್ ದಾಳಿ (ಡಬಲ್-ಟ್ಯಾಪ್) ನಡೆಸಲಾಗಿದೆ. ಮೊದಲ ದಾಳಿಯ ನಂತರ ಪ್ರಾರ್ಥನಾ ಮಂದಿರದಲ್ಲಿ ಆಶ್ರಯ ಪಡೆದಿದ್ದವರನ್ನು ಗುರಿಯಾಗಿಸುವ ಈ ಕ್ರೂರ ತಂತ್ರವು ಕೇವಲ ಯಂತ್ರದ ಆಕಸ್ಮಿಕ ದೋಷವಾಗಿರದೆ, ಉದ್ದೇಶಪೂರ್ವಕವಾಗಿರುವ ಸಾಧ್ಯತೆಗಳೆಡೆಗೆ ಬೊಟ್ಟು ಮಾಡುತ್ತಿದೆ.
ಗುರಿ ತಪ್ಪಿದ ಎಐ: ಹಳೆಯ ಮಾಹಿತಿಯೇ ಮುಳುವಾಯಿತೇ?
ಇರಾನ್ ಮೇಲಿನ ಕಾರ್ಯಾಚರಣೆಯಲ್ಲಿ ಗುರಿಗಳನ್ನು ನಿಖರವಾಗಿ ಮತ್ತು ವೇಗವಾಗಿ ಗುರುತಿಸಲು ಅಮೆರಿಕದ ಸೇನೆಯು ಪಲಾಂಟಿರ್ನ ‘ಮಾವೆನ್ ಸ್ಮಾರ್ಟ್ ಸಿಸ್ಟಮ್’ ಮೂಲಕ ಆಂಥ್ರೋಪಿಕ್ ಸಂಸ್ಥೆಯ ‘ಕ್ಲೌಡ್’ (Claude) ಎಐ ವ್ಯವಸ್ಥೆಯನ್ನು ಬಳಸಿಕೊಂಡಿತ್ತು ಎನ್ನಲಾಗಿದೆ. ಕೇವಲ 24 ಗಂಟೆಗಳಲ್ಲಿ ಸಾವಿರಕ್ಕೂ ಹೆಚ್ಚು ಗುರಿಗಳನ್ನು ಈ ವ್ಯವಸ್ಥೆ ಗುರುತಿಸಿತ್ತು. ಆದರೆ, ನ್ಯೂಯಾರ್ಕ್ ಟೈಮ್ಸ್ ವರದಿಯ ಪ್ರಕಾರ, ಪ್ರಸ್ತುತ ದಾಳಿಗೊಳಗಾದ ಶಾಲೆಯು 2013ರ ಸುಮಾರಿಗೆ ಇರಾನ್ನ ಕ್ರಾಂತಿಕಾರಿ ಪಡೆಗಳ (IRGC) ನೌಕಾ ನೆಲೆಯ ಭಾಗವಾಗಿತ್ತು. ಆದರೆ 2016ರ ವೇಳೆಗೆ ಆ ಕಟ್ಟಡವನ್ನು ಪ್ರತ್ಯೇಕಿಸಿ ಶಾಲೆಯನ್ನಾಗಿ ಪರಿವರ್ತಿಸಲಾಗಿತ್ತು. ಕೃತಕ ಬುದ್ಧಿಮತ್ತೆ ವ್ಯವಸ್ಥೆಯು ಈ ಮಹತ್ವದ ಬದಲಾವಣೆಯನ್ನು ಗ್ರಹಿಸುವಲ್ಲಿ ವಿಫಲವಾಗಿ, ಹಳೆಯ ಉಪಗ್ರಹ ಚಿತ್ರಗಳನ್ನೇ ಆಧರಿಸಿ ಗುರಿ ನಿಗದಿಪಡಿಸಿದ್ದೇ ಇಷ್ಟು ದೊಡ್ಡ ಅನಾಹುತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಎಐ ಮೇಲಿನ ಅತಿಯಾದ ಅವಲಂಬನೆಯಿಂದ ದುರಂತ
ಯುದ್ಧದ ಸಂದರ್ಭದಲ್ಲಿ ಎಐ ಬಳಕೆಯು ‘ಕಿಲ್ ಚೈನ್’ (ಗುರಿ ಗುರುತಿಸಿ ದಾಳಿ ನಡೆಸಲು ಬೇಕಾದ ಪ್ರಕ್ರಿಯೆ ಮತ್ತು ಸಮಯ) ಅವಧಿಯನ್ನು ಗಣನೀಯವಾಗಿ ತಗ್ಗಿಸುತ್ತದೆ ನಿಜ. ಮನುಷ್ಯರಿಗೆ ವಾರಗಟ್ಟಲೆ ಹಿಡಿಯುವ ಕೆಲಸವನ್ನು ಯಂತ್ರಗಳು ಕೇವಲ ಗಂಟೆಗಳಲ್ಲಿ ಮುಗಿಸುತ್ತವೆ. ಆದರೆ, ಸಣ್ಣಪುಟ್ಟ ತಪ್ಪುಗಳೂ ನೂರಾರು ಮುಗ್ಧರ ಪ್ರಾಣಹರಣಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ಮಿನಾಬ್ ಶಾಲೆಯ ದುರಂತವೇ ಜ್ವಲಂತ ಉದಾಹರಣೆ. ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರು ಸೇನೆಯಲ್ಲಿ ಎಐ ಬಳಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರೂ, ವಾಸ್ತವದಲ್ಲಿ ಎಐ ವ್ಯವಸ್ಥೆಗಳು ಇನ್ನೂ ಭ್ರಮೆಗಳಿಗೆ (Hallucinations) ಒಳಗಾಗುವ ಮತ್ತು ತಪ್ಪು ಮಾಹಿತಿ ನೀಡುವ ಸಾಧ್ಯತೆಗಳೇ ಹೆಚ್ಚಿವೆ. ಎಷ್ಟೇ ವೇಗವಾಗಿ ಕೆಲಸ ಮಾಡಿದರೂ, ಯುದ್ಧದಂತಹ ನಿರ್ಣಾಯಕ ಸಂದರ್ಭಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಸಂಪೂರ್ಣವಾಗಿ ನಂಬುವುದು ಭಾರೀ ಅಪಾಯಕಾರಿ ಎಂಬ ಎಚ್ಚರಿಕೆಯನ್ನು ಮಿನಾಬ್ನ ಮುಗ್ಧ ಬಾಲಕಿಯರ ಸಾಮೂಹಿಕ ಸಮಾಧಿಗಳು ಜಗತ್ತಿಗೆ ಸಾರುತ್ತಿವೆ.
ಇದನ್ನೂ ಓದಿ : ಬೆಂಗಳೂರಿನ ಪಿಜಿಗಳಿಗೂ ತಟ್ಟಿದ ‘ವಾರ್’ ಎಫೆಕ್ಟ್.. ಇನ್ಮುಂದೆ ಊಟದ ಮೆನುನೇ ಚೇಂಜ್?


















