ಮುಂಬಯಿ: ಮಹಾರಾಷ್ಟ್ರದ ಮುಂದಿನ ಸಿಎಂ ಬಗ್ಗೆ ಎಲ್ಲೆಡೆ ಕುತೂಹಲ ಮನೆ ಮಾಡಿತ್ತು. ಸದ್ಯದಲ್ಲೇ ಈ ಗೊಂದಲಕ್ಕೆ ತೆರೆ ಬೀಳುವ ಸಾದ್ಯತೆ ಇದ್ದು, ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡ್ನವಿಸ್ ಈ ಬಾರಿ ಸಿಎಂ ಆಗುವುದು ಖಚಿತ ಎನ್ನಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಿತ್ರ ಪಕ್ಷಗಳಿಗಿಂತ ಬಿಜೆಪಿಗೆ ಹೆಚ್ಚು ಸ್ಥಾನಗಳು ಸಿಕ್ಕಿರುವುದರಿಂದ ದೇವೇಂದ್ರ ಫಡ್ನವಿಸ್ ಸಿಎಂ ಆಗಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಏಕನಾಥ್ ಶಿಂಧೆ ಅವರು ಸ್ಪಷ್ಟನೆ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವು ಬದ್ಧ ಎಂದಿದ್ದಾರೆ. ಹೀಗಾಗಿ ದೇವೇಂದ್ರ ಫಡ್ನವಿಸ್ ಸಿಎಂ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸರ್ಕಾರದಲ್ಲಿ ತಮ್ಮ ಮಗ ಶ್ರೀಕಾಂತ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಏಕನಾಥ್ ಶಿಂಧೆ ಬಿಜೆಪಿ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಸದ್ಯದ ಮಾಹಿತಿಯಂತೆ ಶಿವಸೇನೆ ಮತ್ತು ಎನ್‌ಸಿಪಿ ತಲಾ ಒಂದು ಉಪಮುಖ್ಯಮಂತ್ರಿ ಸ್ಥಾನವನ್ನು ಪಡೆಯಲಿವೆ. ಉಪಮುಖ್ಯಮಂತ್ರಿ ಪಾತ್ರವನ್ನು ಒಪ್ಪಿಕೊಳ್ಳುವ ಅಥವಾ ಕೇಂದ್ರ ಸಚಿವ ಸಂಪುಟಕ್ಕೆ ಸೇರುವ ಆಯ್ಕೆಯನ್ನು ಏಕನಾಥ್ ಶಿಂಧೆ ಅವರಿಗೆ ನೀಡಲಾಗಿದೆ ಎನ್ನಲಾಗಿದೆ. ಹೀಗಾಗಿ ತನ್ನ ಮಗನಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆಯನ್ನು ಏಕನಾಥ್ ಶಿಂಧೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹೀಗಾಗಿ ಸಂಪುಟದಲ್ಲಿ ತಮ್ಮ ಪುತ್ರ ಶ್ರೀಕಾಂತ್ ಶಿಂಧೆ ಅವರನ್ನು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ನೇಮಕವಾಗುವ ಸಾಧ್ಯತೆಯೂ ಇದೆ. ಈ ಬೇಡಿಕೆಯನ್ನು ಈಡೇರಿಸಿದರೆ ಸ್ವತಃ ಸರ್ಕಾರದಿಂದ ಹೊರಗುಳಿಯಲು ಸಿದ್ಧ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯತಿ ಮೈತ್ರಿಕೂಟ 288 ಸ್ಥಾನಗಳಲ್ಲಿ 235 ಸ್ಥಾನಗಳನ್ನು ಗೆದ್ದಿದೆ. ಈ ಪೈಕಿ ಬಿಜೆಪಿ 132 ಸ್ಥಾನಗಳಲ್ಲಿ ಗೆದ್ದಿದೆ. ಶಿವಸೇನೆ (ಏಕನಾಥ್ ಶಿಂಧೆ ಬಣ) 57 ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್ಸಿಪಿ ಅಜಿತ್ ಪವಾರ್ ಬಣ) 41 ಸ್ಥಾನಗಳಲ್ಲಿ ಗೆಲುವು ಕಂಡಿದೆ.